ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ’ ಲಭಿಸಿದೆ.

ಬೆಳ್ತಂಗಡಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮದಂತೆ ‘ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ’ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ’ ಲಭಿಸಿದೆ. ದೇಶದಲ್ಲಿ ಬಿ.ಸಿ.ಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಪೈಕಿ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಾತ್ರ ಈ ಪ್ರಶಸ್ತಿಗೆ ಭಾಜನವಾಗಿದೆ.

ಇತ್ತೀಚೆಗೆ ನವದೆಹಲಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್‌ ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಿ. ಸುರೇಂದ್ರ ಕುಮಾರ್‌ ಪ್ರಶಸ್ತಿ ಸ್ವೀಕರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್., ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್. ಪೈ ಹಾಜರಿದ್ದರು.

ಇದೊಂದು ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ತೀರ್ಪುಗಾರರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ದೀಪಕ್ ವರ್ಮ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಕೊಯ್ಲಿ, ಇಂಡಿಯನ್ ಓವರ್ಸಿಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ. ನರೇಂದ್ರ, ಕೆನರಾ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರೊ. ರಾಜೀವ್ ದುಬೆ, ಸಿಡ್ಬಿಯ ಉಪವ್ಯವಸ್ಥಾಪಕ ನಿರ್ದೇಶಕ ಎನ್.ಕೆ. ಮೈನಿ, ಭಾರತೀಯ ಅತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆಯ ಅಧ್ಯಕ್ಷ ಮುಖೇಶ್ ಮೋಹನ್ ಗುಪ್ತಾ ಇನ್ನಿತರರು ತೀರ್ಪುಗಾರರಾಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮುಂತಾದ ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳು ಈ ಪ್ರಶಸ್ತಿಗೆ ಬ್ಯಾಂಕಿಂಗ್ ವಿಭಾಗದಿಂದ ಆಯ್ಕೆಯಾಗಿರುತ್ತವೆ.

ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ದೇಶದ ಆರ್ಥಿಕ ನಿಯಂತ್ರಕ ಸಂಸ್ಥೆಗಳು ಆರ್ಥಿಕ ಸೇರ್ಪಡೆ ಕಾರ್ಯಕ್ರಮದಡಿ ಬಿ.ಸಿ. (ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ) ಸೇವೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರನ್ವಯ ‘ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್’ ಅನ್ನು ಬ್ಯಾಂಕ್‌ಗಳು ‘ಎಸ್.ಹೆಚ್.ಜಿ. ಬ್ಯಾಂಕ್ ಕ್ರೆಡಿಟ್ ಲಿಂಕೆಜ್ ಪ್ರೋಗ್ರಾಂ (ಸ್ವ ಸಹಾಯ ಸಂಘಗಳ ಬ್ಯಾಂಕ್ ಸಾಲ ಸೌಲಭ್ಯ ಒದಗಣೆ)’ ಸೇವೆಗಳನ್ನು ಒದಗಿಸಲು ತನ್ನ ಬ್ಯಾಂಕ್‌ನ ವ್ಯವಹಾರ ಪ್ರತಿನಿಧಿ ಅಂದರೆ ‘ಬಿ.ಸಿ.’ಯಾಗಿ ನಿಯೋಜಿಸಿಕೊಂಡಿವೆ. ತನ್ಮೂಲಕ ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ನೇರವಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿವೆ. ಈ ಮೂಲಕ ಬ್ಯಾಂಕ್‌ನ ಸಾಲ ಸೌಲಭ್ಯಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.

ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸ್ವಉದ್ಯೋಗ ಸೃಷ್ಟಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈವರೆಗೆ ಬ್ಯಾಂಕಿನ ಮೂಲಕ 33, 678 ಕೋಟಿ ರು. ಮೊತ್ತದ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗಿದೆ. ತನ್ಮೂಲಕ ಲಕ್ಷಾಂತರ ಯುವಕ–ಯುವತಿಯರು ಸ್ವ ಉದ್ಯೋಗಿಯಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣೀಭೂತವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 4,41,000 ಮಂದಿಗೆ ಸ್ವಉದ್ಯೋಗ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕಿನಿಂದ ಸಾಲ ಸೌಲಭ್ಯಗಳನ್ನು ಒದಗಿಸಿ ಎಂ.ಎಸ್.ಎಂ.ಇ. ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆಯನ್ನು ನೀಡಿದೆ. ಸಾವಿರಾರು ಮಂದಿ ಗ್ರಾಮೀಣ ಪ್ರದೇಶದ ಯುವಕ–ಯುವತಿಯರು ವ್ಯಾಪಾರ, ಕಿರು ಉದ್ಯಮಗಳನ್ನು ಆರಂಭಿಸುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.