ನಿಂಬೆಗೆ ₹2500 ಬೆಂಬಲ ಬೆಲೆ ಘೋಷಣೆ, ನಿಂಬೆ ಅಭಿವೃದ್ಧಿ ಮಂಡಳಿಯಿಂದ ಖರೀದಿ ಕೇಂದ್ರ ಸ್ಥಾಪನೆ, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಬೇಸಿಗೆ ಸಂದರ್ಭದಲ್ಲಿ ನಿಂಬೆ ಬೆಳೆಗಾರರಿಗೆ ನೀರಿನ ವ್ಯವಸ್ಥೆ ಮಾಡಿಕೊಡಬೇಕು
ಕನ್ನಡಪ್ರಭ ವಾರ್ತೆ ಇಂಡಿ
ಒಂದು ಡಾಗ್ ನಿಂಬೆಗೆ ₹2500 ಬೆಂಬಲ ಬೆಲೆ ಘೋಷಣೆ, ನಿಂಬೆ ಅಭಿವೃದ್ಧಿ ಮಂಡಳಿಯಿಂದ ಖರೀದಿ ಕೇಂದ್ರ ಸ್ಥಾಪನೆ, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಬೇಸಿಗೆ ಸಂದರ್ಭದಲ್ಲಿ ನಿಂಬೆ ಬೆಳೆಗಾರರಿಗೆ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿಂಬೆ ಬೆಳೆಗಾರ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ಇಂಡಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ನೂರಾರು ರೈತರು, ನಗರದ ಮಿನಿವಿಧಾನ ಸೌಧಕ್ಕೆ ತಲುಪಿ ಎಸಿಗೆ ಮನವಿ ಸಲ್ಲಿಸಿದರು.ನಿಂಬೆ ಬೆಳೆಸಬೇಕಾದರೆ ಕನಿಷ್ಠ 5ರಿಂದ 6 ವರ್ಷ ಕಾಯಬೇಕು. ನಂತರವೇ ಫಲ ನೀಡುತ್ತದೆ. 6 ವರ್ಷಗಳ ಕಾಲ ನಿಂಬೆ ಬೆಳೆಗಾರ ಬೆಳೆಸಿದ ನಿಂಬೆಗೆ ಕನಿಷ್ಠ ಬೆಂಬಲ ಬೆಲೆ ಸಿಕ್ಕಾಗ ಮಾತ್ರ ಆ ರೈತ ಉಳಿಯತ್ತಾನೆ. ನಮ್ಮ ನಿಂಬೆಗೆ ವಿದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಕಾರಣ ಈ ನಿಂಬೆ ವಿದೇಶಿ ಮಾರುಕಟ್ಟೆಗೆ ಪರಿಚಯಿಸಬೇಕು. ನಗರದಲ್ಲಿಯೇ ರಾಜ್ಯ ನಿಂಬೆ ಬೆಳೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದೆ. ಅದಕ್ಕೆ ಪೂರ್ಣ ಪ್ರಮಾಣದ ಸಿಬ್ಬಂದಿ ಒದಗಿಸಿ, ಸಾಕಷ್ಟು ಅನುದಾನ ನೀಡಿ, ನಿಂಬೆ ಬೆಳೆಗಾರ ರೈತರಿಗೆ ನಿಂಬೆ ಬೆಳೆಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಳ್ಳುವಂತೆ ತರಬೇತಿ ಆಯೋಜಿಸಬೇಕು. ನಿಂಬೆ ಬೆಳೆಯಿಂದ ಬೈ ಪ್ರೊಡಕ್ಟ್ ಮಾಡಲು ಇಲ್ಲಿಯೇ ಬೃಹತ್ ಪ್ರಮಾಣದ ಕಾರ್ಖಾನೆ ಸಿದ್ಧಪಡಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ಎಸಿ ಚಿದಾನಂದ ಗುರುಸ್ವಾಮಿ ಮನವಿ ಪತ್ರ ಸ್ವೀಕರಿಸಿ, ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವುದಾಗಿ ತಿಳಿಸಿದರು.