ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಲೋಕಸಭಾ ಚುನಾವಣೆ ಘೋಷಣೆಯಾಗಿ ಬರೋಬ್ಬರಿ ಒಂದು ತಿಂಗಳು ಗತಿಸಿದ್ದು, ಧಾರವಾಡ ಕ್ಷೇತ್ರದಲ್ಲಿ ಇದೀಗ ಚುನಾವಣಾ ಕಣ ರಂಗೇರುತ್ತಿದೆ.
ಕಳೆದ ಮಾ. 16ರಂದು ಚುನಾವಣೆ ಘೋಷಣೆಯಾಗಿತ್ತು. ಆದರೆ, 2ನೇ ಹಂತದ ಚುನಾವಣೆ ಕಾರಣದಿಂದ ಧಾರವಾಡ ಕ್ಷೇತ್ರದಲ್ಲಿ ಹೇಳಿಕೊಳ್ಳುವ ರಾಜಕೀಯ ಚಟುವಟಿಕೆ ಗರಿಗೆದರಿರಲಿಲ್ಲ. ಆದರೆ, ರಾಜಕೀಯ ಪಕ್ಷಗಳ ಮುಖಂಡರು ತೆರೆಮರೆಯಲ್ಲಿ ಪ್ರಚಾರ ಕಾರ್ಯ ಶುರು ಮಾಡಿದ್ದರು. ಯಾವಾಗ ಕಳೆದ ಏ. 12ರಿಂದ ನಾಮಪತ್ರ ಸಲ್ಲಿಕೆ ಶುರುವಾಯಿತೋ ಅಲ್ಲಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಶುರುವಾಗಿವೆ. ಕಳೆದ ಎರಡ್ಮೂರು ದಿನಗಳಲ್ಲಂತೂ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಅದ್ಧೂರಿ ಮೆರವಣಿಗೆ ಮೂಲಕ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.ದೊಡ್ಡ ಕ್ಷೇತ್ರ:
ಧಾರವಾಡ ಲೋಕಸಭಾ ಕ್ಷೇತ್ರವು ಸಣ್ಣದೇನಲ್ಲ. ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರವನ್ನೂ ಒಳಗೊಂಡಿದೆ. 8,99,246 ಪುರುಷ, 8,92,043 ಮಹಿಳೆ ಸೇರಿದಂತೆ ಬರೋಬ್ಬರಿ 17,91,386 ಮತದಾರರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿಗಳಿಗಿದೆ. ಈ ಹಿನ್ನೆಲೆಯಲ್ಲಿ 2ನೇ ಹಂತದ ಚುನಾವಣೆ ಧಾರವಾಡ ಕ್ಷೇತ್ರದ ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ತಿಂಗಳಿಗಿಂತಲೂ ಹೆಚ್ಚಿನ ಸಮಯ ದೊರಕಿದೆ. ಟಿಕೆಟ್ ಘೋಷಣೆಯಾದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಈಗಾಗಲೇ ಒಂದು ಸುತ್ತಿನ ಕ್ಷೇತ್ರ ಭೇಟಿ ನಡೆಸಿದ್ದು, ಇನ್ಮುಂದೆ ಪಕ್ಷಗಳ ಮುಖಂಡರನ್ನು ಕರೆಯಿಸಿ ಬಹಿರಂಗ ಪ್ರಚಾರ ಶುರು ಮಾಡಲಿದ್ದಾರೆ.22ರಿಂದ ಚುನಾವಣಾ ಕಣ ಸಿದ್ಧ:
ಈಗಾಗಲೇ ಏ. 15ರಂದು ಬಿಜೆಪಿಯಿಂದ ಪ್ರಹ್ಲಾದ ಜೋಶಿ, ಏ. 16ರಂದು ಕಾಂಗ್ರೆಸ್‌ನ ವಿನೋದ ಅಸೂಟಿ ಇಬ್ಬರೂ ಗೆಲುವಿನ ಆಶಯದೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಏ. 22 ಕೊನೆಯ ದಿನವಾಗಿದ್ದು, ಬಳಿಕ ಅಂತಿಮ ಚುನಾವಣಾ ಕಣ ಸಿದ್ಧಗೊಳ್ಳಲಿದೆ. ಹೀಗಾಗಿ ಮೇ 7ರಂದು ನಡೆಯಲಿರುವ ಮತದಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಯಾವ ವಿಧಾನಭಾ ಕ್ಷೇತ್ರದಲ್ಲಿ ಯಾವತ್ತು ಬಹಿರಂಗ ಸಭೆ ನಡೆಸಬೇಕು? ಯಾವ ಸ್ಟಾರ್ ಪ್ರಚಾರಕರನ್ನು ಕರೆಯಿಸಬೇಕು? ಅದಕ್ಕೆ ಬೇಕಾದ ಪರವಾನಗಿ ಸೇರಿದಂತೆ ಬೇಕಾದ ಸಿದ್ಧತೆ ಕೈಗೊಂಡಿದ್ದಾರೆ. ಕೆಲವೇ ದಿನಗಳಲ್ಲಿ ರಾಜಕೀಯ ಸಮಾವೇಶಗಳ ಭರಾಟೆ ಶುರುವಾಗಲಿದೆ.24ರಂತರ ಮತ್ತಷ್ಟು ಜೋರು:
ಅದಕ್ಕಿಂತ ಹೆಚ್ಚಾಗಿ ಏ. 26ರಂದು ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯಗೊಳ್ಳಲಿದ್ದು, ಇದಕ್ಕಿಂತ ಎರಡು ದಿನ ಮುಂಚೆಯೇ ಕ್ಷೇತ್ರದಲ್ಲದವರು ಕ್ಷೇತ್ರ ಬಿಡುವ ಕಾರಣ ಏ. 24ರ ನಂತರ ಇಡೀ ರಾಜಕೀಯ ಪಕ್ಷಗಳ ಮುಖಂಡರ ತಂಡವು ಹುಬ್ಬಳ್ಳಿ-ಧಾರವಾಡದಲ್ಲಿ ಮೊಕ್ಕಾಂ ಹೂಡುವುದು ಸ್ಪಷ್ಟ.ಇನ್ನು, ನಾಮಪತ್ರ ಸಲ್ಲಿಕೆ ಶುರುವಾಗುವ ತಡ ಕ್ಷೇತ್ರದಲ್ಲಿ ಲೆಕ್ಕವಿಲ್ಲದ ಕೋಟಿ ಕೋಟಿ ಹಣ ಸಿಗುತ್ತಿದೆ. ಮಂಗಳವಾರ ಧಾರವಾಡದ ಅಪಾರ್ಟ್‌ಮೆಂಟ್‌ನಲ್ಲಿ ₹18 ಕೋಟಿ ಹಣ ಸಿಕ್ಕಿದ್ದು, ಹಣದ ಮೂಲ ತೆಗೆಯಲಾಗುತ್ತಿದೆ. ಧಾರವಾಡ ಹಾಗೂ ಬೆಳಗಾವಿ ಭಾಗದಲ್ಲಿ ಹಣ ಹಂಚಲು ಇಡಲಾಗಿತ್ತು ಎಂಬ ಮಾತು ಕೇಳಿ ಬರುತ್ತಿವೆ. ಕಳೆದ ಸೋಮವಾರ ಹುಬ್ಬಳ್ಳಿಯ ರಾಮನಕೊಪ್ಪ ಚೆಕ್‌ಪೋಸ್ಟ್ ಕಣ್ತಪ್ಪಿಸಿ ಎರಡು ಕೋಟಿ ರು. ಅಧಿಕ ಹಣ ಸಾಗಿಸುತ್ತಿದ್ದ ವಾಹನವನ್ನು ಬೆನ್ನು ಹತ್ತಿ ಹಿಡಿಯಲಾಗಿದೆ. ಇದಕ್ಕೂ ಮುಂಚೆ ಮದ್ಯ ಹಾಗೂ ದಾಖಲೆ ಇಲ್ಲದ ಹಣದ ಪ್ರಕರಣಗಳು ದಾಖಲಾಗಿದ್ದು, ಇನ್ನು, ಪ್ರಚಾರ ಸಮಯದಲ್ಲಿ ಚುನಾವಣಾ ಕಣ ಯಾವೆಲ್ಲ ರೀತಿಯಲ್ಲಿ ರಂಗೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಐವರಿಂದ ಆರು ನಾಮಪತ್ರಗಳ ಸಲ್ಲಿಕೆಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಯ ಐದನೆಯ ದಿನ ಗುರುವಾರ ಐವರು ಅಭ್ಯರ್ಥಿಗಳಿಂದ ಆರು ನಾಮಪತ್ರಗಳು ಸಲ್ಲಿಕೆ ಆಗಿವೆ. ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನಗೌಡ ಬಾಳನಗಾಡ್ರ, ದಿಂಗಾಲೇಶ್ವರ ಸ್ವಾಮೀಜಿ (ಎರಡು ಸೆಟ್), ಶಕೀಲ್ ಅಹ್ಮದ ದೊಡವಾಡ ಮತ್ತು ವಿರೋಕೆ ವೀರ ಇಂಡಿಯನ್ ಪಾರ್ಟಿಯಿಂದ ರವಿ ಪಟ್ಟಣಶಟ್ಟಿ, ನಾಕಿ ಭಾರತೀಯ ಏಕತಾ ಪಕ್ಷದಿಂದ ಜಾವೀದ ಅಹ್ಮದ ಬೆಳಗಾಂವಕರ ಅವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.