ಅಗಲಿದ ಹಾಸ್ಯ ನಟ ದ್ವಾರಕೀಶ್‌ ಚಿತ್ರರಂಗದಲ್ಲಿ ಸೋಲು, ಗೆಲವು ಕಂಡರೂ ಅವರು ಸೋಲನ್ನು ಒಪ್ಪಿಕೊಳ್ಳದೆ ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಂಡು ಜಯಶೀಲರಾಗುತ್ತಿದ್ದರು ಎಂದು ಸಿನಿಮಾ ರಂಗದ ಸಹ ನಿರ್ದೇಶಕ ಸತೀಶ್‌ ಆಚಾರ್‌ ತಿಳಿಸಿದರು.

ಅಂಬೇಡ್ಕರ್‌ ವೃತ್ತದಲ್ಲಿ ದ್ವಾರಕೀಶ್‌ ಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅಗಲಿದ ಹಾಸ್ಯ ನಟ ದ್ವಾರಕೀಶ್‌ ಚಿತ್ರರಂಗದಲ್ಲಿ ಸೋಲು, ಗೆಲವು ಕಂಡರೂ ಅವರು ಸೋಲನ್ನು ಒಪ್ಪಿಕೊಳ್ಳದೆ ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಂಡು ಜಯಶೀಲರಾಗುತ್ತಿದ್ದರು ಎಂದು ಸಿನಿಮಾ ರಂಗದ ಸಹ ನಿರ್ದೇಶಕ ಸತೀಶ್‌ ಆಚಾರ್‌ ತಿಳಿಸಿದರು.

ಬುಧವಾರ ಸಂಜೆ ವಾಟರ್‌ ಟ್ಯಾಂಕ್‌ ಸರ್ಕಲ್ ನಲ್ಲಿ ಅಭಿನವ ಪ್ರತಿಭಾ ವೇದಿಕೆ ಆಶ್ರಯದಲ್ಲಿ ಅಗಲಿದ ನಟ ದ್ವಾರಕೀಶ್‌ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿ.ರಾಜೇಂದ್ರ ಬಾಬು ನಿರ್ದೇಶನದ ಯಾರೇ ನೀ ಅಭಿಮಾನಿ ಚಿತ್ರದಲ್ಲಿ ನಾನು ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅದರಲ್ಲಿ ದ್ವಾರಕೀಶ್‌ ಪೋಷಕ ಪಾತ್ರ ವಹಿಸಿದ್ದರು.1965 ರ ಹೊತ್ತಿಗೆ ಸಿನಿಮಾ ರಂಗಕ್ಕೆ ಬಂದಿದ್ದ ದ್ವಾರಕೀಶ್‌ 300 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದರು.

50 ಸಿನಿಮಾಗಳನ್ನು ನಿರ್ಮಿಸಿದ್ದರು. 20 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಅವರು ಸಿನಿಮಾ ರಂಗಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಪರಭಾಷೆಯ ಯಶಸ್ವಿ ಚಿತ್ರಗಳನ್ನು ಕನ್ನಡ ಚಿತ್ರಕ್ಕೆ ತಂದು ಯಶಸ್ಸು ಕಂಡಿದ್ದರು ಎಂದರು.

ಕಲಾವಿದ ಅಭಿನವ ಗಿರಿರಾಜ್‌ ಮಾತನಾಡಿ, ದ್ವಾರಕೀಶ್‌ ತಮ್ಮನ್ನು ಕುಳ್ಳ ಏಜೆಂಟ್ ಕರೆದುಕೊಳ್ಳುತ್ತಿದ್ದರು. ಹಿಂದೆ ಟೆಂಟ್ ಸಿನಿಮಾಗಳಲ್ಲಿ ಪ್ರಚಂಡ ಕುಳ್ಳ, ಅದೃಷ್ಠವಂತ, ಕಿಟ್ಟುಪುಟ್ಟ ಸಿನಿಮಾ ನೋಡಿದ ನೆನಪಾಗುತ್ತಿದೆ. ದ್ವಾರಕೀಶ್‌ ನಿಧನ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಹಾಸ್ಯ ಲೋಕದ ನಕ್ಷತ್ರವನ್ನು ಕಳೆದುಕೊಂಡಿದ್ದೇವೆ. ನಟನಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಎಲ್ಲಾ ರಂಗದಲ್ಲೂ ಯಶಸ್ಸು ಕಂಡಿದ್ದರು. ಸಿನಿಮಾ ರಂಗದ ಮೊದಲ ಕನಸುಗಾರ ದ್ವಾರಕೀಶ್‌ ಎಂದರು.

ಕಲಾವಿದ ಪುರುಶೋತ್ತಮ್‌ ಮಾತನಾಡಿ, ಆಗಿನ ಕಾಲದಲ್ಲೇ ದ್ವಾರಕೀಶ್ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದರು. ಅವರ ಮಕ್ಕಳು ದ್ವಾರಕೀಶ್‌ ಬ್ಯಾನರ್ ಅಡಿ ಇನ್ನಷ್ಟು ಉತ್ತಮ ಚಿತ್ರ ನೀಡಲಿ ಎಂದರು.

ಸಭೆಯಲ್ಲಿ ರಕ್ತದಾನಿ ಬಳಗದ ಅಧ್ಯಕ್ಷ ಅರ್ಜುನ್‌, ಇಂದಿರಾ ನಗರದ ಯುವಕ ಸಂಘದ ಅಧ್ಯಕ್ಷ ಕಿರಣ್‌, ಜೇಸಿ ಸಂಸ್ಥೆ ಉಪಾಧ್ಯಕ್ಷ ಅಜೇಯ್‌, ಸೌಂಡ್ಸ್‌ ಶಾಮಿಯಾನ ಸಂಘದ ಗೌರವಾಧ್ಯಕ್ಷ ನಾಗಾರ್ಜನ್‌, ಕಲಾವಿದೆ ಮಂಜುಳಾ, ಪುಟಾಣಿ ಗ್ರೀಷ್ಮಾ, ಗೀತಾಂಜಲಿ ಇದ್ದರು.