ಕನ್ನಡಪ್ರಭ ವಾರ್ತೆ ಕುಮಟಾಯಾವುದೇ ವಿಪತ್ತು ನಿರ್ವಹಣೆ ನಮ್ಮೆಲ್ಲರ ಹೊಣೆ, ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ. ಹೀಗಾಗಿ ವಿಪತ್ತು ಎದುರಿಸಲು ಬೇಕಾದ ಕೌಶಲ್ಯ ಪಡೆದು ಎಲ್ಲರೂ ದೈಹಿಕ-ಮಾನಸಿಕವಾಗಿ ಸಿದ್ಧರಿರಬೇಕು ಎಂದು ಎನ್‌ಡಿಆರ್‌ಎಫ್ ಟೀಮ್ ಕಮಾಂಡರ್ ಇನ್‌ಸ್ಪೆಕ್ಟರ್ ಬಬ್ಲೂ ವಿಶ್ವಾಸ್ ಹೇಳಿದರು.

ಇಲ್ಲಿನ ಡಾ. ಬಾಳಿಗಾ ವಾಣಿಜ್ಯ ಕಾಲೇಜ್‌ನಲ್ಲಿ ಗುರುವಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ಹಲವಾರು ಬಗೆಯಲ್ಲಿ ನೈಸರ್ಗಿಕ ಹಾಗೂ ಇತರ ವಿಪತ್ತುಗಳು ಹೆಚ್ಚುತ್ತಿವೆ. ಸಾವು- ನೋವು, ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಅರಿವು ಮೂಡಿಸಿ ವಿವಿಧ ಕೌಶಲ್ಯಗಳನ್ನು ಜನ ಸಾಮಾನ್ಯರು ಕೂಡಾ ಅಳವಡಿಸಿಕೊಳ್ಳಲು ಎನ್‌ಡಿಆರ್‌ಎಫ್ ತಂಡ ನಿರಂತರವಾಗಿ ಶ್ರಮಿಸುತ್ತಿದೆ. ಯುವಶಕ್ತಿ ದೇಶದ ಜನರ ಸಂಕಷ್ಟದ ಸಮಯದಲ್ಲಿ ಸ್ಪಂದಿಸಲು, ಸಹಕರಿಸಲು, ಹೋರಾಡಲು ಸರ್ವಸನ್ನದ್ಧರಾಗಿರಬೇಕು ಎಂದರು. ವಿಶೇಷ ಉಪನ್ಯಾಸಕ ನೀಡಿದ ಹೆಡ್ ಕಾನ್‌ಸ್ಟೇಬಲ್ ಅರ್ಜುನ್ ಎಸ್. ಕೆ ಮಾತನಾಡಿ, ಭೂಕಂಪ, ಅತಿವೃಷ್ಟಿ, ಪ್ರವಾಹ ಮೊದಲಾದ ಪ್ರಾಕೃತಿಕ ವಿಕೋಪಗಳು, ರೈಲ್ವೆ, ಬಸ್, ವಿಮಾನ, ದೋಣಿ ಮುಂತಾದವುಗಳ ದುರಂತಗಳಲ್ಲಿ ಸಂತ್ರಸ್ತರ ನೆರವಿಗೆ ಎನ್‌ಡಿಆರ್‌ಎಫ್ ತಂಡ ಧಾವಿಸಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸುತ್ತದೆ. ಇಂತಹ ಆಪತ್ಕಾಲದಲ್ಲಿ ಕೈಗೊಳ್ಳಬೇಕಾದ ಹಾಗೂ ಅನುಸರಿಸಬೇಕಾದ ಕ್ರಮಗಳನ್ನು ಎಲ್ಲರೂ ತಿಳಿದುಕೊಂಡಿರಬೇಕು. ಹೃದಯಾಘಾತ, ಹಾವು ಕಡಿತ ಮೊದಲಾದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವುದನ್ನೂ ಕಲಿತಿರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್.ಡಿ. ನಾಯ್ಕ, ಇಂತಹ ಜಾಗೃತಿ ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಮಾಜದಲ್ಲಿ ಆಪತ್ಕಾಲದಲ್ಲಿ ಮುಂದೆ ಬಂದು ನೆರವಾಗಬೇಕು ಎಂದರು. ಎನ್‌ಡಿಆರ್‌ಎಫ್ ತಂಡದವರು ವಿಪತ್ತು ಹಾಗೂ ಅಪಘಾತ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೂನಿಯನ್ ಕಾರ್ಯಾಧ್ಯಕ್ಷ ಡಾ. ಅರವಿಂದ ನಾಯಕ, ಪ್ರೊ. ಸಂತೋಷ ಶಾನಭಾಗ, ಪ್ರೊ. ರಾಗಿಣಿ ಸಿ. ವೇದಿಕೆಯಲ್ಲಿದ್ದರು. ಡಾ. ಮಂಜುನಾಥ ವೆರ್ಣೆಕರ ಸ್ವಾಗತಿಸಿ ಪರಿಚಯಿಸಿದರು. ಯೂನಿಯನ್ ಕಾರ್ಯದರ್ಶಿ ವಿಕಾಸ ನಾಯ್ಕ ವಂದಿಸಿದರು.