ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಭಾರತದ ಸಂವಿಧಾನದ ಅನುಚ್ಛೇದ 80 ಮತ್ತು 171ರ ಪ್ರಕಾರ ಲೋಕಸಭಾ ಮತ್ತು ಅಸೆಂಬ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ 50 ವರ್ಷಗಳ ಬಳಿಕ ನಡೆಯಲಿದ್ದು, ಮುಂದಿನ ಚುನಾವಣೆಗೆ ಇದು ಹೊಸ ದಿಕ್ಸೂಚಿ ಆಗಲಿದೆ. ಕ್ಷೇತ್ರ ಪುನರ್ ವಿಂಗಡಣೆಯಾದರೆ ದ.ಕ. ಜಿಲ್ಲೆಯಲ್ಲಿ ಹಾಲಿ ಎಂಟು ಅಸೆಂಬ್ಲಿ ಕ್ಷೇತ್ರಗಳಿಗೆ ಮತ್ತೆ ಮೂರು ಕ್ಷೇತ್ರಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಅಂದರೆ ದ.ಕ.ದಲ್ಲಿ ಒಟ್ಟು 11 ಅಸೆಂಬ್ಲಿ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿದೆ. ಆದರೆ ಲೋಕಸಭಾ ಕ್ಷೇತ್ರದ ಸಂಖ್ಯೆ ಬದಲಾಗುವ ಸಾಧ್ಯತೆ ಇಲ್ಲ.
ಲಭ್ಯ ಮಾಹಿತಿ ಪ್ರಕಾರ ಹೆಚ್ಚುವರಿ ಮೂರು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ಮಹಿಳಾ ಮೀಸಲು ಇರಲಿದೆ. ಲೋಕಸಭಾ ಕ್ಷೇತ್ರ ಕೂಡ ಮಹಿಳಾ ಮೀಸಲಿಗೆ ಪರಿಗಣನೆಗೊಂಡರೂ ಆಶ್ಚರ್ಯ ಇಲ್ಲ. ಹಾಗಾಗಿ ಕ್ಷೇತ್ರಗಳ ಪುನರ್ ವಿಂಗಡಣೆ ಪೂರ್ಣಗೊಳ್ಳುವ ಮುನ್ನ ಅಂತಿಮ ಲೆಕ್ಕಾಚಾರ ಹೇಳುವುದು ಕಷ್ಟ.ಪ್ರಸಕ್ತ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಲ್ಕಿ ಮೂಡುಬಿದಿರೆ ಒಳಗೊಂಡಂತೆ ಎಂಟು ಅಸೆಂಬ್ಲಿ ಕ್ಷೇತ್ರಗಳಿವೆ. 2008ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಎಸ್‌ಸಿ ಎಸ್‌ಟಿ ಸೀಟು ಮೀಸಲು ಹೆಚ್ಚಳಕ್ಕೆ ವಿಟ್ಲ, ಸುರತ್ಕಲ್ ಕ್ಷೇತ್ರಗಳ ಹೆಸರು ಕೈಬಿಟ್ಟು ಪುನರ್ ವಿಂಗಡಣೆ ಮಾಡಲಾಗಿತ್ತು. ಆದರೆ ಕ್ಷೇತ್ರಗಳ ಸಂಖ್ಯೆಯಲ್ಲಿ ಹಾಗೂ ಮೀಸಲು ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಈ ಪೈಕಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಮೂಲ್ಕಿ, ಮಂಗಳೂರು ಗ್ರಾಮಾಂತರ ಹಾಗೂ ಕಡಬ ಪ್ರತ್ಯೇಕ ಕ್ಷೇತ್ರವಾಗಿ ರೂಪುಗೊಳ್ಳುವ ಸಾಧ್ಯತೆ ಹೇಳಲಾಗಿದೆ. ಮೂಲ್ಕಿ ಮತ್ತು ಕಡಬ ಈಗಾಗಲೇ ಹೊಸ ತಾಲೂಕು ಆಗಿವೆ. ಉಳ್ಳಾಲ ಹೊರತುಪಡಿಸಿ ಮಂಗಳೂರು ನಗರ ಹಾಗೂ ಮಂಗಳೂರು ಉತ್ತರ ಕ್ಷೇತ್ರಗಳನ್ನು ಉಳಿಸಿಕೊಂಡು ಇವುಗಳ ಕೆಲವು ಭಾಗಗಳನ್ನು ಸೇರಿಸಿ ಮಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಗೊಳ್ಳುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ. ಮಹಿಳಾ ಮೀಸಲು ನಿಗದಿ ಹೇಗೆ?:
ಮುಂದಿನ ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆ ವೇಳೆ ಕ್ಷೇತ್ರಗಳು ಪುನರ್ ವಿಂಗಡಣೆಗೊಳ್ಳುವುದು ಬಹುತೇಕ ಖಚಿತ. ಆದರೆ ಮಹಿಳಾ ಮೀಸಲು ಕ್ಷೇತ್ರಗಳನ್ನು ಹೇಗೆ ನಿಗದಿ ಮಾಡುತ್ತಾರೆ ಎನ್ನುವುದು ಕುತೂಹಲದ ಸಂಗತಿ. ಯಾಕೆಂದರೆ, ಏಪ್ರಿಲ್‌ನಲ್ಲಿ ನಡೆಯುವ ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲು ಜಾರಿಗೊಳ್ಳುವುದರಿಂದ ಶೇ.33ರ ಮಹಿಳಾ ಸೀಟುಗಳನ್ನು ಮೀಸಲಿರಿಸುವುದು ಕಡ್ಡಾಯವಾಗಲಿದೆ. ಇದರಿಂದ ಕೆಲವು ಕಡೆಗಳಲ್ಲಿ ಹಾಲಿ ಪುರುಷ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮತ್ತೆ ಸ್ಪರ್ಧಿಸುವ ಹಾಲಿ ಜನಪ್ರತಿನಿಧಿಗಳಿಗೆ ಕ್ಷೇತ್ರ ಪುನರ್ ವಿಂಗಡಣೆ ದೊಡ್ಡ ತಲೆನೋವು ಮಾತ್ರವಲ್ಲ ಸವಾಲು ಆಗಿ ಪರಿಗಣಮಿಸಲಿದೆ. ಯಾವ ಜನಗಣತಿ ಮಾನದಂಡ?
2011ರ ದೇಶದ ಜನಗಣತಿಯ ಮಾನದಂತೆ ಶೇ.50ರಷ್ಟು ಸೀಟುಗಳ ಹೆಚ್ಚಳ ನಿಯಮ ಅನುಸರಿಸಿದರೆ ಕರ್ನಾಟಕದಲ್ಲಿ 28 ಲೋಕಸಭಾ ಸೀಟುಗಳ ಸಂಖ್ಯೆ 42ಕ್ಕೆ ಏರಲಿದೆ. 224 ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ 336 ಆಗಲಿದೆ. ಇಲ್ಲಿ ಕೂಡ ಶೇ.33ರಷ್ಟು ಮಹಿಳಾ ಮೀಸಲು ಲೆಕ್ಕಹಾಕಿದರೆ ಹೆಚ್ಚಳಗೊಳ್ಳುವ ಸೀಟುಗಳು(14 ಹಾಗೂ 112) ಪೂರ್ತಿ ಮಹಿಳೆಯರ ಪಾಲಾಗಲಿದೆ. 2026ರ ಜನಗಣತಿ ಮಾನದಂಡ ಅನುಸರಿಸಿದರೆ ಇದೆಲ್ಲವೂ ಮತ್ತಷ್ಟು ಹೆಚ್ಚಳವಾಗಲಿದೆ.ಅಸೆಂಬ್ಲಿ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಜನಸಂಖ್ಯೆ ಮಾನದಂಡದ ಬದಲು ಎಲ್ಲ ಕ್ಷೇತ್ರಗಳ ಸಂಖ್ಯೆಯನ್ನು ಶೇ.50ರಷ್ಟು ಸಮಾನಾಗಿ ಹೆಚ್ಚಳಗೊಳಿಸುವ ಮಾತನ್ನು ಪ್ರಧಾನ ಮಂತ್ರಿ ಹೇಳಿದ್ದಾರೆ. ಶೇ.33ರಷ್ಟು ಮಹಿಳಾ ಮೀಸಲು ಬಗ್ಗೆ ಏ.16ರಿಂದ ನಡೆಯುವ ಲೋಕಸಭಾ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಿ ಜಾರಿಯಾಗಲಿದೆ. ಬಳಿಕ ಶೇ.50ರಷ್ಟು ಸೀಟುಗಳ ಹೆಚ್ಚಳವನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆಯೂ ಬರಲಿದೆ.50 ವರ್ಷಗಳ ಬಳಿಕ ಮರು ವಿಂಗಡಣೆ: 1975ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭ ಸಂವಿಧಾನ 42ನೇ ತಿದ್ದುಪಡಿ ಅನ್ವಯ ಪ್ರತಿ 10 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು 25 ವರ್ಷಗಳ ವರೆಗೆ ಎಂದು ನಿಶ್ಚಯಿಸಲಾಯಿತು. ಹಾಗಾಗಿ ಮಹಾ ಜನಗಣತಿ ನಡೆದರೂ ಕ್ಷೇತ್ರಗಳ ಪುನರ್ ವಿಂಗಡಣೆಗೆ ಅವಕಾಶ ಇರಲಿಲ್ಲ. 2001ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಆಗಿನ ಪ್ರಧಾನಿ ವಾಜಪೇಯಿ ಮುಂದಾದಾಗ ತಮಿಳ್ನಾಡು ಸಿಎಂ ಜಯಲಲಿತಾ ವಿರೋಧಿಸಿದ್ದರು. ಜನಸಂಖ್ಯೆ ನಿಯಂತ್ರಣ ನಿಯಮ ಪಾಲಿಸುತ್ತಿರುವಾಗ ಅದೇ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಅಂತಹ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಹೀಗಾಗಿ ಮತ್ತೆ 25 ವರ್ಷಗಳ ಕಾಲ ಕ್ಷೇತ್ರಗಳ ಪುನರ್ ವಿಂಗಡಣೆ ಮುಂದೂಡಲಾಯಿತು. ಈ ಮಧ್ಯೆ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಹಾಲಿ ವ್ಯವಸ್ಥೆಯಲ್ಲೇ ಎಸ್‌ಸಿ ಎಸ್‌ಟಿಗೆ ಹೆಚ್ಚಿನ ಮೀಸಲಾತಿ ನಿಗದಿಪಡಿಸಲಾಯಿತು.2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಮಹಾಜನಗಣತಿ ನಡೆದಿರಲಿಲ್ಲ. ಈಗ 2026ರಲ್ಲಿ ಮಹಾಜನಗಣತಿ ನಡೆಯುತ್ತಿದೆ. ಇದರ ಬೆನ್ನಿಗೆ ಕ್ಷೇತ್ರ ವಿಂಗಡಣೆಯೂ ನಡೆಯಬೇಕು. 2023ರಲ್ಲಿ ಸುಪ್ರೀಂ ಕೋರ್ಟ್ ಶೇ.33ರ ಮಹಿಳಾ ಮೀಸಲಾತಿಗೆ ಆದೇಶಿಸಿತ್ತು. ಅದನ್ನು ಈಗ ಕೇಂದ್ರ ಸರ್ಕಾರ ಕಾಯ್ದೆ ಮೂಲಕ ಕಾರ್ಯಗತಗೊಳಿಸಲು ಹೊರಟಿದೆ. ಹೀಗಾಗಿ ಶೇ.33ರ ಮಹಿಳಾ ಮೀಸಲಾತಿಯನ್ನು ವಿಪಕ್ಷಗಳು ವಿರೋಧಿಸುವಂತೆಯೂ ಇಲ್ಲ, ಜೊತೆಗೆ ಪುರುಷ ಸ್ಪರ್ಧೆಯ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಶೇ.50ರ ಸೀಟು ಹೆಚ್ಚಳ ಕೇಂದ್ರ ತಂತ್ರಗಾರಿಕೆಗೆ ಶರಣಾಗದೆಯೂ ವಿಧಿಯೂ ಇಲ್ಲ ಎಂಬಂತಾಗಿದೆ.
ಲೋಕತಂತ್ರ ವ್ಯವಸ್ಥೆಯಲ್ಲಿ ದೇಶದ ಪ್ರಗತಿಯಲ್ಲಿ ಜನಪ್ರಾತಿನಿಧ್ಯದ ವ್ಯವಸ್ಥೆಯೂ ಅಭಿವೃದ್ಧಿ ಕಾಣಬೇಕು. ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಸಂವಿಧಾನಕ್ಕೆ ತಿದ್ದುಪಡಿ ತಂದ ಕಾರಣ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ಸ್ತಬ್ಧಗೊಂಡಿತ್ತು. ಈಗ ಜನಪ್ರಾತಿನಿಧ್ಯ ಹೆಚ್ಚಿಸುವ ಮೂಲಕ ಅಂಬೇಡ್ಕರ್‌ರ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಎತ್ತಿ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ.-ವಿಕಾಸ್ ಪುತ್ತೂರು, ವಕ್ತಾರ, ಬಿಜೆಪಿ ಕರ್ನಾಟಕ
ಭಾರತದಲ್ಲಿ ಪ್ರಾದೇಶಿಕವಾರು ಜನಸಂಖ್ಯೆ ಕಡಿಮೆ ಇರುವಲ್ಲಿಗೆ ಶಿಕ್ಷೆ ಆಗಬಾರದು. ಕ್ಷೇತ್ರ ಪುನರ್ ವಿಂಗಡಣೆ ವಿಚಾರ ಕೇವಲ ರಾಜಕೀಯ ಅಥವಾ ಪಕ್ಷದ ತೀರ್ಮಾನವಾಗದೆ ಲೋಕಸಭೆಯಲ್ಲಿ ಹಾಗೂ ಸಾರ್ವಜನಿಕವಾಗಿ ಸಂವಾದ ನಡೆದೇ ಅಂತಿಮಗೊಳ್ಳಬೇಕು. ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ತಾರತಮ್ಯವಾದರೆ ಆಂತರಿಕ ಬೇಗುದಿ ಜಾಸ್ತಿಯಾಗಬಹುದು.-ಎಂ.ಜಿ.ಹೆಗಡೆ, ವಕ್ತಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ