ಕನ್ನಡಪ್ರಭ ವಾರ್ತೆ ಹೊಸದುರ್ಗ

ಬಸವಣ್ಣನವರ ವಚನಗಳಲ್ಲಿ ಅಡಗಿರುವ ಬದುಕಿನ ಸತ್ಯಗಳನ್ನು ಅರ್ಥೈಸಿಕೊಳ್ಳಲು ವಿವೇಚನಾ ಶಕ್ತಿಯ ಅಗತ್ಯವಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಬೊಮ್ಮಣ್ಣರ ಶರಣೆ ದಾಕ್ಷಾಯಣಮ್ಮ ರಾಮಲಿಂಗಪ್ಪನವರ ಮನೆಯಂಗಳದಲ್ಲಿ ನಡೆದ ಅನುಭಾವದೆಡೆಗೆ ಚಿಂತನಾಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ದೇವರನ್ನು ಗುಡಿ ಗುಂಡಾರ ಮಠ ಅಥವಾ ಪ್ರಕೃತಿಯ ಪಂಚಭೂತಗಳಲ್ಲಿ ಹುಡುಕುತ್ತೇವೆ. ಪ್ರತಿಯೊಬ್ಬ ಮನುಷ್ಯನ ಒಳಗೂ ದೈವತ್ವ ಅಡಗಿದೆ. ನಮ್ಮನ್ನು ಆವರಿಸಿರುವ ಅಜ್ಞಾನವೆಂಬ ಕತ್ತಲೆ. ಕಣ್ಣುಗಳು ಚೆನ್ನಾಗಿದ್ದರೂ ಕತ್ತಲೆಯಲ್ಲಿ ವಸ್ತುಗಳು ಕಾಣಿಸದಂತೆ ಅಜ್ಞಾನದ ಕತ್ತಲೆಯಲ್ಲಿ ನಮ್ಮೊಳಗಿನ ದೈವತ್ವ ನಮಗೆ ಅರಿವಾಗುತ್ತಿಲ್ಲ. ನಮ್ಮೊಳಗಿನ ಈ ದೈವತ್ವವನ್ನು ಕಾಣಲು ಸದ್ಗುರುವಿನ ಮಾರ್ಗದರ್ಶನ ಎಂಬ ಬೆಳಕು ಅತ್ಯಗತ್ಯ. ಸಂಸ್ಕಾರ ಮತ್ತು ಜ್ಞಾನದ ಮೂಲಕ ಮಾತ್ರ ನಮ್ಮ ಅಂತರಂಗದ ಶಿವನನ್ನು ನಾವು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ ಎಂದರು.

ಮನುಷ್ಯ ತನ್ನ ದುರಾಸೆಯಿಂದ ನಿರ್ಮಿಸಿಕೊಂಡಿರುವ ಗೋಡೆಗಳನ್ನು ಕೆಡವಿ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಿದೆ. 12ನೇ ಶತಮಾನದ ಅನುಭವ ಮಂಟಪವು ಜಾತ್ಯತೀತ ಮತ್ತು ಲಿಂಗಾತೀತ ಸಮಾಜಕ್ಕೆ ಮುನ್ನುಡಿ ಬರೆದಿತ್ತು. ಅಲ್ಲಿ ಅಲ್ಲಮ ಪ್ರಭುಗಳು, ಚೆನ್ನ ಬಸವಣ್ಣ, ಅಕ್ಕ ಮಹಾದೇವಿ, ಸೂಳೆ ಸಂಕವ್ವೆ ಹಾಗೂ ಹೆಂಡದ ಮಾರಯ್ಯನವರಂತಹ ವಿಭಿನ್ನ ಹಿನ್ನೆಲೆಯ ಶರಣರು ಸಮಾನತೆಯಿಂದ ಬದುಕಿದ್ದರು. ಅನೇಕರು ವೃತ್ತಿ ಮತ್ತು ಕಾಯಕದ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಕಾಯಕ ಎಂಬುದು ಕೇವಲ ಹೊಟ್ಟೆಪಾಡಿಗಾಗಿ ಮಾಡುವ ಕೆಲಸವಲ್ಲ ಅದು ಸತ್ಯ ಮತ್ತು ಶುದ್ಧತೆಯಿಂದ ಕೂಡಿದ ಅಧ್ಯಾತ್ಮಿಕ ಹಾದಿ. ಕಾಯಕದಿಂದ ವ್ಯಕ್ತಿ ಹಾಗೂ ಸಮಾಜದ ವಿಕಾಸವಾಗಬೇಕು ಎಂದರು.


ಶರಣ ಚಿಂತಕ ಪರಮೇಶ್ವರಪ್ಪ ಮಾತನಾಡಿ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ, ಜಾತಿ ಭೇದ ಮತ್ತು ಅಸಮಾನತೆಯನ್ನು ತೊಡೆದುಹಾಕಲು ಬಸವಣ್ಣನವರ ತತ್ವಗಳೇ ದಾರಿದೀಪ .ಲಿಂಗಾಯತ ಧರ್ಮ ಎಂಬುದು ಕೇವಲ ಒಂದು ಜಾತಿಯಲ್ಲ, ಅದೊಂದು ಮಾನವೀಯ ತತ್ವಗಳನ್ನು ಒಳಗೊಂಡ ವಿಶ್ವಧರ್ಮ. ಮನುಷ್ಯನ ದೈಹಿಕ ಸ್ವಚ್ಛತೆಗೆ ಸ್ನಾನ, ಬಟ್ಟೆಯ ಸ್ವಚ್ಛತೆಗೆ ಮಡಿವಾಳ ಬೇಕು. ಆದರೆ ಮನಸ್ಸಿನ ಮೈಲಿಗೆಯನ್ನು ಕಳೆಯಲು ಶರಣರ ಅನುಭಾವ ಹಾಗೂ ಬಸವತತ್ವದ ಅರಿವು ಅತ್ಯಗತ್ಯ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಆದ್ರಿಕಟ್ಟೆಯ ಬಸವರಾಜಪ್ಪ, ಗ್ರಾಮದ ಹಿರಿಯರಾದ ಎಸ್‌.ಆರ್.ಚಂದ್ರಶೇಖರಯ್ಯ ಮಾತನಾಡಿದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್, ದಾಕ್ಷಾಯಿಣಿ, ಶರಣ್, ಅಕ್ಕನ ಬಳಗದವರು ವಚನಗೀತೆಗಳನ್ನು ಹಾಡಿದರು. ನಿವೃತ್ತ ಶಿಕ್ಷಕ ವೀರಭದ್ರಪ್ಪ ಸ್ವಾಗತಿಸಿದರೆ ಪ್ರಕಾಶ್ ಎಸ್ ಎಸ್ ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ‌ ತಾಲ್ಲೂಕು ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಸ್ ಸಿದ್ದಪ್ಪ ಉಪಸ್ಥಿತರಿದ್ದರು.