ಬಸವರಾಜ ಹಿರೇಮಠ
ಧಾರವಾಡ:ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೂನ್ 21ರಿಂದ ರಾಜ್ಯದಲ್ಲಿ ದಂಡದ ಮೊತ್ತದ ಮೇಲೆ ಶೇ. 50ರಷ್ಟು ರಿಯಾಯಿತಿ ನೀಡಿ, ದಂಡ ತುಂಬಿಸಿಕೊಳ್ಳಲಾಗುತ್ತಿದೆ. ಅರ್ಧದಷ್ಟು ರಿಯಾಯಿತಿ ಹಿನ್ನೆಲೆಯಲ್ಲಿ ದಂಡ ತುಂಬಲು ವಾಹನ ಮಾಲೀಕರು ಸಹ ಉತ್ಸುಕರಾಗಿದ್ದಾರೆ. ಆದರೆ, ಕೆಲವು ತಾಂತ್ರಿಕ ಅಡಚಣೆಗಳು ದಂಡ ತುಂಬಬೇಕೆನ್ನುವ ವಾಹನ ಸವಾರರು ಸೇರಿದಂತೆ ಸಂಚಾರ ಪೊಲೀಸರಿಗೂ ತಲೆ ನೋವಾಗಿದೆ.
ದಂಡದ ಮೊತ್ತದ ಮೇಲೆ ಶೇ, 50ರ ರಿಯಾಯಿತಿಯನ್ನು ಈ ಮುಂಚೆಯೂ ಹಲವು ಬಾರಿ ನೀಡಲಾಗಿತ್ತು. ಆ ಸಂದರ್ಭದಲ್ಲೂ ತರಹೇವಾರಿ ಕಾರಣಗಳಿಂದಾಗಿ ದಾಖಲಾದ ಪ್ರಕರಣಗಳಿಗೆ ದಂಡ ತುಂಬಿದ್ದರು. ಈ ಬಾರಿಯೂ ವಾಹನ ಸವಾರರು ದಂಡ ತುಂಬಲು ಉತ್ಸುಕರಾಗಿದ್ದಾರೆ. ಒಂದು ಬಾರಿ ಟ್ರಾಫಿಕ್ ಪೊಲೀಸರ ದಾಖಲೆಗಳಲ್ಲಿ ದಂಡದ ಕಾರಣ ಹಾಗೂ ಮೊತ್ತ ನಮೂದಾದರೆ ಅದನ್ನು ತುಂಬುವ ವರೆಗೂ ತೆಗೆಯಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಸರ್ಕಾರ ನೀಡಿದ ಈ ರಿಯಾಯಿತಿ ಅವಕಾಶ ಬಳಸಿಕೊಳ್ಳಲು ಬಹುತೇಕ ವಾಹನ ಸವಾರರು ತುದಿಗಾಲಿನ ಮೇಲಿದ್ದಾರೆ.ಸಾಫ್ಟ್‌ವೇರ್ ಸಮಸ್ಯೆ:
ಆದರೆ, ಈ ಮುಂಚೆ ದಾಖಲಾಗಿರುವ ಪ್ರಕರಣದ ಪೈಕಿ ಕೆಲವು ಪ್ರಕರಣಗಳಿಗೆ ಶೇ. 50 ರಿಯಾಯಿತಿ ಎಂದು ಸಾಫ್ಟ್‌ವೇರ್‌ನಲ್ಲಿ ತೋರಿಸಿದರೆ, ಅದೇ ವಾಹನದ ಮತ್ತೆ ಕೆಲವು ಪ್ರಕರಣಗಳಿಗೆ ಯಾವುದೇ ರಿಯಾಯಿತಿ ತೋರಿಸುತ್ತಿಲ್ಲ. ಇದರಿಂದಾಗಿ ವಾಹನ ಮಾಲೀಕರು ಹಾಗೂ ಟ್ರಾಫಿಕ್ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.
ವಾಹನವೊಂದರ ಮೇಲೆ ಒಟ್ಟು ಎಂಟು ಪ್ರಕರಣಗಳಿವೆ. ಅವುಗಳ ಪೈಕಿ ನಾಲ್ಕು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಾಗಿದ್ದರೆ, ಇನ್ನುಳಿದ ನಾಲ್ಕು ಪ್ರಕರಣಗಳು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಾಗಿವೆ. ಈ ವಾಹನದ ನಂಬರ್ ಸಾಫ್ಟ್‌ವೇರ್‌ನಲ್ಲಿ ಹಾಕಿದರೆ, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿರುವ ನಾಲ್ಕೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇ. 50ರಷ್ಟು ರಿಯಾಯಿತಿ ತೋರಿಸುತ್ತಿದೆ. ಆದರೆ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ ನಾಲ್ಕು ಪ್ರಕರಣಗಳಿಗೆ ರಿಯಾಯಿತಿ ತೋರಿಸುತ್ತಿಲ್ಲ. ಇದು ಎಲ್ಲ ಪ್ರಕರಣಗಳಿಗೂ ಅನ್ವಯವಲ್ಲ. ಕೆಲವು ಪ್ರಕರಣಗಳಿಗೆ ಮಾತ್ರ ಹೀಗಾಗುತ್ತಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡುತ್ತಾರೆ.
ಹೀಗಾಗಿ ವಾಹನ ಮಾಲೀಕರಿಂದ ಎಷ್ಟು ದಂಡ ತುಂಬಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ಪೊಲೀಸರಿದ್ದರೆ, ಸರ್ಕಾರ ಘೋಷಿಸಿದ ಶೇ. 50ರಷ್ಟು ರಿಯಾಯಿತಿ ಇಲ್ಲದೇ ಇದ್ದರೆ ನಾನೇಕೆ ಈಗ ದಂಡ ಕಟ್ಟಲಿ ಎನ್ನುವ ವಾದ ವಾಹನ ಸವಾರರು ಮಂಡಿಸುತ್ತಿದ್ದಾರೆ.ಸರ್ವರ್ ಸಮಸ್ಯೆ:
ಹು-ಧಾ ಅವಳಿ ನಗರದಲ್ಲಿ ಮೊದಲಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವಾಹನದ ದಂಡ ಕಟ್ಟಿ, ದಂಡ ಮುಕ್ತರಾಗಲು ಬಯಸುತ್ತಿದ್ದಾರೆ. ಆದರೆ, ಆರಂಭದಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ಈಗಷ್ಟೇ ಅದು ಸುಧಾರಿಸುತ್ತಿದೆ. ಶೇ. 50ರ ಬದಲು ಶೇ.100ರಷ್ಟು ದಂಡದ ಸಮಸ್ಯೆಯೊಂದಿಗೆ ಸರ್ವರ್ ಸಮಸ್ಯೆಯಿಂದ ಅದೆಷ್ಟೋ ವಾಹನ ಸವಾರರು ದಂಡ ತುಂಬಲು ಬಂದು ಮರಳಿದ್ದಾರೆ. ಆದ್ದರಿಂದ ಕೂಡಲೇ ಈ ತಾಂತ್ರಿಕ ತೊಂದರೆ ನಿವಾರಿಸುವುದಲ್ಲದೇ ಜು. 10ರ ವರೆಗೆ ನೀಡಿರುವ ಗಡುವನ್ನು ಮತ್ತಷ್ಟು ದಿನ ವಿಸ್ತರಿಸಬೇಕೆಂಬುದು ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ ಹಾಗೂ ವಾಹನ ಸವಾರರಾದ ಮಂಜುನಾಥ ನೀರಲಕೇರಿ ಆಗ್ರಹಿಸುತ್ತಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಮೇ ತಿಂಗಳೊಳಗಿನ ಪ್ರಕರಣಗಳಿಗೆ ಮಾತ್ರ ಶೇ. 50ರ ರಿಯಾಯಿತಿ ನೀಡಿದ್ದು ನಂತರದಲ್ಲಿ ದಂಡ ಹಾಕಿದ್ದರೆ ಅವುಗಳಿಗೆ ಶೇ.100ರಷ್ಟು ದಂಡ ತೋರಿಸುತ್ತಿದೆ. ಇನ್ನು, ಆರಂಭದಲ್ಲಿ ಸರ್ವರ್ ಸಮಸ್ಯೆ ಇದ್ದು ಎರಡು ದಿನಗಳಿಂದ ಸರಿಯಾಗಿದ್ದು ನಿತ್ಯ 1000 ಪ್ರಕರಣಗಳ ದಂಡವನ್ನು ನಮ್ಮ ಸಿಬ್ಬಂದಿ ತುಂಬಿಸಿಕೊಳ್ಳುತ್ತಿದ್ದಾರೆ. ಈ ವರೆಗೆ 8000 ಪ್ರಕರಣಗಳಿಂದ ₹ 4 ಲಕ್ಷ ವರೆಗೂ ದಂಡ ತುಂಬಿಸಿಕೊಳ್ಳಲಾಗಿದೆ.ಶ್ರೀನಿವಾಸ ಮೇಟಿ, ಟ್ರಾಫಿಕ್ ಇನ್‌ಸ್ಟೆಕ್ಟರ್ ಧಾರವಾಡ