ಹೊಸಪೇಟೆ: ಭಾರತೀಯ ಇತಿಹಾಸದ ಆಕರಗಳಲ್ಲಿ ಸ್ಮಾರಕ ಶಿಲ್ಪಗಳ ಪಾತ್ರವು ಮಹತ್ವದ್ದಾಗಿದೆ ಎಂದು ಉಪನ್ಯಾಸಕ ಡಾ. ಮದ್ದಾನಸ್ವಾಮಿ ಯರಬಾಳ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಹಾವೇರಿ ಜಿಲ್ಲೆಯ ಸ್ಮಾರಕ ಶಿಲ್ಪಗಳ ಮಹತ್ವ ಮತ್ತು ವೈವಿಧ್ಯತೆ ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಿರಾರು ಸ್ಮಾರಕ ಶಿಲ್ಪಗಳನ್ನು ತನ್ನ ಮಡಿಲಿನಲ್ಲಿ ಹೊಂದಿ ಅವುಗಳನ್ನು ಪೋಷಿಸಿಕೊಂಡು ಬಂದಿರುವ ಹಾವೇರಿ ಜಿಲ್ಲೆ ಐತಿಹಾಸಿಕವಾಗಿ ಸಂಪದ್ಭರಿತವಾದ ಪ್ರದೇಶವಾಗಿದೆ. ಆದರೆ ನಮ್ಮ ಜನರ ಇತಿಹಾಸ ಪ್ರಜ್ಞೆಯ ಕೊರತೆಯಿಂದ ಅವುಗಳು ಅನಾದಾರಕ್ಕೂ ಒಳಗಾಗಿರುವುದು ಅಷ್ಟೇ ಸತ್ಯವಾಗಿದೆ ಎಂದು ಹೇಳಿದರು.

‘ಸ್ಮಾರಕ ಶಿಲ್ಪಗಳು ಎಂದರೆ ಯಾವುದೋ ವ್ಯಕ್ತಿ, ಘಟನೆ ಅಥವಾ ತ್ಯಾಗವನ್ನು ನೆನಪಿಸಲು ನಿರ್ಮಿಸಿದ ಶಿಲಾ ರೂಪದ ಸ್ಮರಣಿಕೆಗಳು. ಇವು ಒಂದೇ ರೀತಿಯವಲ್ಲ; ವೀರಗಲ್ಲು, ಮಾಸ್ತಿಗಲ್ಲು, ನಿಷಿಧಿಗಲ್ಲು ಮತ್ತು ಇತರ ಬಲಿದಾನ ಶಿಲ್ಪಗಳಾಗಿ ಕಾಣಿಸುತ್ತವೆ. ಇವುಗಳ ಮೂಲಕ ಆ ಕಾಲದ ಸಾಮಾಜಿಕ ಮೌಲ್ಯಗಳು, ಧಾರ್ಮಿಕ ಭಾವನೆಗಳು ಮತ್ತು ಸ್ಥಳೀಯ ಪರಂಪರೆ ತಿಳಿಯುತ್ತದೆ. ಕೆಲವೊಮ್ಮೆ ಇವು ಶಾಸನಗಳೊಂದಿಗೆ ಸಂಪರ್ಕ ಹೊಂದಿದ್ದು, ಶಿಲ್ಪ ಮತ್ತು ಲಿಪಿಯ ಎರಡೂ ಮಾಹಿತಿಯನ್ನು ಒಂದೇ ಕಡೆ ನೀಡುತ್ತವೆ ಎಂದು ಹೇಳಿದರು.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ಮಾರಕ ಶಿಲ್ಪಗಳು ಮತ್ತು ವೀರಗಲ್ಲುಗಳು ಇತಿಹಾಸ ಅಧ್ಯಯನಕ್ಕೆ ಬಹಳ ಉಪಯುಕ್ತ ಆಕರಗಳು. ಲಿಖಿತ ದಾಖಲೆಗಳಲ್ಲಿ ಕಾಣದ ಸ್ಥಳೀಯ ಘಟನೆಗಳು, ಯುದ್ಧಗಳು, ವಂಶಾವಳಿಗಳು, ಸಾಮಾಜಿಕ ಆಚರಣೆಗಳು ಮತ್ತು ಜನಜೀವನದ ಅಂಶಗಳು ಇವುಗಳಿಂದ ತಿಳಿದುಬರುತ್ತವೆ. ವಿಶೇಷವಾಗಿ ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದ ಗ್ರಾಮೀಣ ಇತಿಹಾಸವನ್ನು ತಿಳಿಯಲು ವೀರಗಲ್ಲುಗಳು ಅತ್ಯಂತ ಪ್ರಮುಖ ಸಾಕ್ಷ್ಯಗಳು ಎಂದರು.

ಸ್ಮಾರಕಶಿಲ್ಪಗಳು ಕೇವಲ ಐತಿಹಾಸಿಕ ದಾಖಲೆಗಳಲ್ಲ; ಅವು ಶಿಲ್ಪಕಲೆಯೂ ಹೌದು. ಶಿಲ್ಪಿಗಳು ಕಥನವನ್ನು ಹಂತ ಹಂತವಾಗಿ ಕಟ್ಟುವ ವಿಧಾನ, ಮುಖಭಾವ, ಆಯುಧಗಳ ನಿರೂಪಣೆ, ಉಡುಪು-ಆಭರಣಗಳ ವಿವರಗಳು ಮತ್ತು ಶಾಸನಗಳೊಂದಿಗೆ ಹೊಂದಾಣಿಕೆ ಇವೆಲ್ಲವು ಅವುಗಳ ಕಲಾತ್ಮಕ ಶಕ್ತಿಯನ್ನು ತೋರಿಸುತ್ತವೆ. ಅನೇಕ ಸ್ಮಾರಕ ಶಿಲ್ಪಗಳು ನಾಶ, ಸ್ಥಳಾಂತರ, ಹವಾಮಾನ ಹಾನಿ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಆದ್ದರಿಂದ ಅವುಗಳ ದಾಖಲಾತಿ, ಸಂರಕ್ಷಣೆ ಮತ್ತು ಅಧ್ಯಯನ ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.


ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಎರ‍್ರಿಸ್ವಾಮಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ರಮೇಶ ನಾಯಕ ಉಪಸ್ಥಿತರಿದ್ದರು.