ಸುದ್ದಿಗೋಷ್ಠಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಮಾಹಿತಿ
ಕನ್ನಡಪ್ರಭ ವಾರ್ತೆ ಶಿರಸಿತಾಲೂಕಿನ ಸಿಂಗನ ಮನೆ ಗ್ರಾಮದ ಕಾಡಿನಲ್ಲಿ ಯುವಕನ ಕೊಲೆ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಕೊಲೆಯಾದ ವ್ಯಕ್ತಿಯನ್ನು ತಾಲೂಕಿನ ಇಟಗುಳಿ ಗ್ರಾಪಂ ವ್ಯಾಪ್ತಿಯ ಸಿಂಗನ ಮನೆ ನಿವಾಸಿ ಪರಮೇಶ್ವರ ನಾಯ್ಕ್ (35) ಎಂದು ಗುರುತಿಸಲಾಗಿದೆ ಎಂದರು.ಘಟನೆ ವಿವರ:
ಸಿಂಗನ ಮನೆಯ ಪರಮೇಶ್ವರ ನಾಯ್ಕ್ ಜೂ. 25 ಸಂಜೆ 7.45ರ ಸಮಯದಲ್ಲಿ ಯಾರದ್ದೋ ಕರೆ ಬಂದ ತಕ್ಷಣ ಮನೆಯಿಂದ ಹೊರಟು ಹೋದವನು ಇದುವರೆಗೂ ಮನೆಗೆ ಬಂದಿರುವುದಿಲ್ಲ. ಅವರನ್ನು ಪತ್ತೆ ಮಾಡಿ ಎಂದು ಜೂ.25ರಂದು ಮಧ್ಯರಾತ್ರಿ 12ರ ಸುಮಾರಿಗೆ ಪೊಲೀಸ್ ತುರ್ತು ಸಂಖ್ಯೆಗೆ ದೂರು ಬಂದ ಹಿನ್ನೆಲೆ ಇಆರ್‌ಎಸ್‌ಎಸ್ (ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ) ತಂಡದವರು ಹಾಗೂ ಶಿರಸಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಾಪತ್ತೆಯಾದ ವ್ಯಕ್ತಿ ಪತ್ತೆಗಾಗಿ ಪರಿಶೀಲನೆ ನಡೆಸಿದ್ದರು.
ಶುಕ್ರವಾರ ಬೆಳಗ್ಗೆ ಡಾಗ್ ಸ್ಕ್ವಾಡ್ ಸಮೇತ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪರಮೇಶ್ವರ ಮನೆಯಿಂದ 200 ಮೀಟರ್ ದೂರದ ಕಾಡಿನಲ್ಲಿ ಅವರ ಶವ ಪತ್ತೆಯಾಗಿದೆ ಎಂದರು.
ಆರೋಪಿ ಪರಮೇಶ್ವರ ತಿಮ್ಮ ನಾಯ್ಕನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಈಗ ಕೊಲೆಗೆ ನಿಖರ ಕಾರಣ ಏನಿರಬಹುದು ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಮುಂದುವರಿಸಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್ ಕುಮಾರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.