ಹುಬ್ಬಳ್ಳಿ:
ಒಣ ತ್ಯಾಜ್ಯದಿಂದ ಇದ್ದಿಲು ಉತ್ಪಾದಿಸುವ "ಕಸದಿಂದ ಇಂಧನ(ವೇಸ್ಟ್ ಟು ಎನರ್ಜಿ) ಸ್ಥಾವರ " ಜನವರಿಯಿಂದ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಗಬ್ಬೂರಿನ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ)ದ ಅಂಗ ಸಂಸ್ಥೆ ವಿದ್ಯುತ್ ವ್ಯಾಪಾರ ನಿಗಮ (ಎನ್‌ವಿವಿಎನ್)ವು ಮಹಾನಗರ ಪಾಲಿಕೆಯ ಒಣ ತ್ಯಾಜ್ಯ ಸಂಸ್ಕರಿಸಿ ಇದ್ದಿಲು ಉತ್ಪಾದಿಸುವ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಅಲ್ಲಿನ ಸೌಲಭ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
8 ಎಕರೆ ಪ್ರದೇಶದಲ್ಲಿ ₹157 ಕೋಟಿ ವೆಚ್ಚದಲ್ಲಿ ಈ ಘಟಕ ನಿರ್ಮಿಸಿದ್ದು ಕಾರ್ಯಾರಂಭದ ಬಳಿಕ ನಿತ್ಯ 200 ಟನ್ ಒಣ ತ್ಯಾಜ್ಯವನ್ನು ಇದ್ದಿಲನ್ನಾಗಿ ಪರಿವರ್ತಿಸಲಿದೆ. ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು ಜನವರಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಉತ್ಪಾದಿಸುವ ಇದ್ದಿಲನ್ನು ಕಲ್ಲಿದ್ದಲು ಉತ್ಪಾದಿಸುವ ಕೈಗಾರಿಕೆಗಳಿಗೆ ರವಾನಿಸಲಾಗುತ್ತದೆ. ಈ ಘಟಕಕ್ಕೆ ಶೇ. 20ರಷ್ಟು ಮಾತ್ರ ವಿದ್ಯುತ್ ಬಳಕೆ ಮಾಡುತ್ತಿದ್ದು ಉಳಿದ ಶಕ್ತಿಯನ್ನು ತ್ಯಾಜ್ಯ ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಉಂಟಾಗುವ ಗ್ಯಾಸ್‌ನಿಂದ ಕಾರ್ಯನಿರ್ವಹಿಸಲಾಗುವುದು ಎಂದ ಅವರು, ಇಲ್ಲಿ ತಯಾರಿಸುವ ಇದ್ದಿಲು ನೇರವಾಗಿ ಕುಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಬಳಕೆಯಾಗಲಿದೆ ಎಂದರು.ಈ ಘಟಕದ ನಿರ್ವಹಣೆಗೆ ವಿದ್ಯುತ್ ವ್ಯಾಪಾರ ನಿಗಮವು ಪ್ರತಿ ವರ್ಷ ₹11 ಕೋಟಿ ವೆಚ್ಚ ಮಾಡಲಿದೆ ಎಂದ ಅವರು, ಇಲ್ಲಿ 200ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಈ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ ಘಟಕ ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಕಸ ಸುಡದೆ, ಕರಗಿಸುವ ಮೂಲಕ ವಾಯು ಮಾಲಿನ್ಯವನ್ನು ಶೂನ್ಯಕ್ಕಿಳಿಸುವ ತಂತ್ರಜ್ಞಾನ ಇದಾಗಿದೆ. ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಿಗೂ ಮುನ್ನ ಹುಬ್ಬಳ್ಳಿ-ಧಾರವಾಡದಲ್ಲಿ ಈ ಯೋಜನೆ ಜಾರಿಯಾಗಿರುವುದು ಇಂಧನ ಕ್ರಾಂತಿಯಾಗಿದೆ ಎಂದ ಅವರು, ಮಹಾನಗರದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ಈ ಮೂಲಕ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ- ಧಾರವಾಡ ನಗರಗಳು ಉತ್ತಮ ಸ್ಥಾನ ಪಡೆದುಕೊಳ್ಳಬಹುದು. ವ್ಯವಸ್ಥಿತ ರೀತಿಯಲ್ಲಿ ಕಸ ಸಂಗ್ರಹಿಸುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಒಣ ಕಸದಿಂದ ಇದ್ದಿಲನ್ನಾಗಿ ಪರಿವರ್ತಿಸುವಾಗ ಗ್ಯಾಸ್ ಉತ್ಪಾದನೆಯಾಗುತ್ತಿದ್ದು, ಆ ಗ್ಯಾಸ್ ಬಳಕೆಗೆ ಶೀಘ್ರದಲ್ಲಿಯೇ ಬಿಪಿಸಿಲ್ ಘಟಕದವರೊಂದಿಗೆ ಚರ್ಚಿಸುತ್ತೇವೆ. ಇದ್ದಿಲು ಬಳಕೆ ಮಾಡಿದ ನಂತರ ಉಳಿಯುವ ತ್ಯಾಜ್ಯವನ್ನು ಪಾಲಿಕೆ ಗೊಬ್ಬರ ತಯಾರಿಸಲು ವಿನಿಯೋಗಿಸಲಿದ್ದಾರೆ. ಇದರಿಂದ ಪಾಲಿಕೆಗೆ ಆರ್ಥಿಕವಾಗಿ ಲಾಭವಾಗಲಿದೆ ಎಂದರು.
ಈ ವೇಳೆ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಆಯುಕ್ತ ಡಾ. ರುದ್ರೇಶ ಘಾಳಿ, ಪಾಲಿಕೆ ಸದಸ್ಯೆ ಶಾಂತವ್ವ ಹಿರೇಮಠ, ಉಪಆಯುಕ್ತ ವಿಜಯಕುಮಾರ ಸೇರಿದಂತೆ ಹಲವರಿದ್ದರು.ಕಸದ ಸಮಸ್ಯೆಗೆ ಮುಕ್ತಿ
ಹು-ಧಾ ಮಹಾನಗರದಲ್ಲಿ 300 ಟನ್ ಹಸಿ ಹಾಗೂ 200 ಟನ್ ಒಣ ಕಸ ಸಂಗ್ರಹವಾಗುತ್ತದೆ. ಈ ಯೋಜನೆಯಿಂದಾಗಿ ಕಸದ ರಾಶಿ ಶೇಖರಣೆಯಾಗುವ ತ್ಯಾಜ್ಯದ ಪ್ರಮಾಣ ಸಂಪೂರ್ಣ ಇಳಿಕೆಯಾಗಲಿದೆ. ಕಸದ ರಾಶಿಯಿಂದ ಹರಡುತ್ತಿದ್ದ ದುರ್ವಾಸನೆ, ಅಂತರ್ಜಲ ಮಾಲಿನ್ಯ ಮತ್ತು ಸಾರ್ವಜನಿಕ ಆರೋಗ್ಯದ ಮೇಲಾಗುತ್ತಿದ್ದ ದುಷ್ಪರಿಣಾಮಗಳಿಗೆ ಇದರಿಂದ ಶಾಶ್ವತ ಪರಿಹಾರ ಸಿಗಲಿದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.