ಕನ್ನಡಪ್ರಭ ವಾರ್ತೆ ರಾಮನಗರ
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಜಿಲ್ಲಾ ಕೇಂದ್ರ ರಾಮನಗರದ ಐಜೂರು ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಮಂಗಳಮ್ಮ ಶಂಭೂಗೌಡ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಬೆಂಗಳೂರಿನ ಲೋಕಭವನದಲ್ಲಿ ಸಂಜೆ 4 ಗಂಟೆ 5 ನಿಮಿಷಕ್ಕೆ ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸಂತಸಗೊಂಡ ಕಾರ್ಯಕರ್ತರು ವೃತ್ತದಲ್ಲಿ ಪಟಾಕಿ ಸಿಡಿಸಿದರೆ, ಮಹಿಳಾ ಮುಖಂಡರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಪಟ್ಟರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷೆ ಮಂಗಳಮ್ಮ ಶಂಭೂಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಕೆಂಗಲ್ ಆಂಜನೇಯ, ಶನಿದೇವರು, ಮಂಟೇದಲಿಂಗಯ್ಯ ದೇವರುಗಳಲ್ಲಿ ಮಹಿಳಾ ಮುಖಂಡರು ಹರಕೆ ಹೊತ್ತು ಪಾದ ಕೇಳಿದ್ದೆವು. ನಮ್ಮ ಪ್ರಾರ್ಥನೆಗೆ ದೇವರು ಫಲ ಕೊಟ್ಟಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.ಡಿಕೆಶಿರವರ ಸ್ಫೂರ್ತಿಯಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಸಂಘಟನೆಯಾಗಿದೆ. ಅವರ ಮಾರ್ಗದರ್ಶನದಲ್ಲಿ ಮಹಿಳೆಯರಾದ ನಾವುಗಳು ಸೂಕ್ತ ಸ್ಥಾನಮಾನ ಪಡೆಯಲು ಸಾಧ್ಯವಾಗಿದೆ. ಡಿಕೆಶಿರವರ ಸಹಕಾರದಿಂದ ನಾನು ನಗರಸಭೆ ಸದಸ್ಯಳಾಗಿ, ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೇವೆ. ಡಿಕೆಶಿ ಸಂಘಟನಾ ಚತುರ ಎಂದು ಗುಣಗಾನ ಮಾಡಿದರು.
ನಗರಸಭೆ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಮಾತನಾಡಿ, ಡಿ.ಕೆ.ಶಿವಕುಮಾರ್ 8 ಬಾರಿ ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಗಳಾಗಿ ರಾಜ್ಯದ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿದ್ದರು. ಉತ್ತಮ ಆಡಳಿತ ಕೊಡುವ ನುರಿತ ರಾಜಕಾರಣಿ ಸಹ ಆಗಿದ್ದಾರೆ. ಅವರಿಗೆ ಎಷ್ಟೇ ಸಂಕಷ್ಟ ಬಂದರೂ ಎದೆಗುಂದದೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
ಜಿಲ್ಲಾ ಪಂಚಾಯಿಯಿ ಮಾಜಿ ಸದಸ್ಯೆ ಮಂಜುಳಾ ಮರಿದೇವರು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ಸದಸ್ಯರಾದ ವಿಜಯಕುಮಾರಿ ಮಹಿಳಾ ಮುಖಂಡರಾದ ಲೀಲಾವತಿ, ಗೀತಾ, ಶೀಲಾ ಮತ್ತಿತರರು ಹಾಜರಿದ್ದರು.