ಬಂಗಾರಪೇಟೆ: ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಿಸಿಕೊಂಡಿರುವವರಿಗೆ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಹಿನ್ನೆಲೆ ತಹಸೀಲ್ದಾರ್ ಸುಜಾತ ಅವರು ಸ್ಥಳ ಪರಿಶೀಲನೆ ಮಾಡಲು ಹೋದಾಗ ಸರ್ವೆಯನ್ನು ಪಕ್ಷಪಾತವಾಗಿ ಮಾಡಲಾಗಿದೆ. ನಾವು ತೆರವು ಮಾಡುವುದಿಲ್ಲ. ಮರು ಸರ್ವೆ ಮಾಡಬೇಕು ಎಂದು ಒತ್ತುವರಿದಾರರು ಆಗ್ರಹಿಸಿದ ಘಟನೆ ನಡೆಯಿತು.

ನಗರದ ಕಾರಹಳ್ಳಿ ಪಂ: ಸರ್ವೆ ನಂಬರ್‌ಗಳಿಗೆ ಸೇರಿದ ರಾಜಕಾಲುವೆಯನ್ನು ಕೆಲ ರಿಯಲ್ ಎಸ್ಟೇಟ್ ಮಾಲೀಕರು ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಿ ಅಮಾಯಕರಿಗೆ ಮಾರಾಟ ಮಾಡಿದ್ದರು. ಈ ಬಗ್ಗೆ ಪ್ರೇಮ್‌ ಕುಮಾರ್ ಎಂಬಾತ ಲೋಕಾಯುಕ್ತರಿಗೆ ದೂರು ನೀಡಿ ರಾಜಕಾಲುವೆ ಆಕ್ರಮಿಸಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದು ಸರ್ವೆ ಮಾಡಿ ತೆರವುಗೊಳಿಸುವ ಮೂಲಕ ಮಳೆ ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ದೂರು ನೀಡಿದ್ದರು. ಅದರಂತೆ ಸರ್ವೆ ಮಾಡಿ ವರದಿ ನೀಡುವಂತೆ ಲೋಕಾಯುಕ್ತರು ಆದೇಶದಂತೆ ಸರ್ವೆ ಇಲಾಖೆ ಈಗಾಗಲೇ ಸರ್ವೆ ಮಾಡಿ ಸುಮಾರು 24 ಮಂದಿ ವಿವಿಧ ಸರ್ವೆಗಳ ನಂಬರ್‌ಗಳಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ವರದಿ ತಯಾರಿಸಿ ಎಲ್ಲೆಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗುರುತು ಸಹ ಮಾಡಿ ತಹಸೀಲ್ದಾರ್‌ಗೆ ಸಲ್ಲಿಸಿದ್ದರು.

ಅದರಂತೆ ತಾಲೂಕು ಆಡಳಿತ 24 ಮಂದಿಗೆ ಕೂಡಲೇ ತೆರವುಗೊಳಿಸುವಂತೆ ಎರಡು ಬಾರಿ ನೋಟಿಸ್‌ ನೀಡಿದ್ದರೂ ಕ್ಯಾರೆ ಎನ್ನದೆ ಇದ್ದುದ್ದರಿಂದ ತಹಸೀಲ್ದಾರ್ ಸುಜಾತ ಅವರು ಬುಧವಾರ ಸ್ಥಳಕ್ಕೆ ಹೋದಾಗ ಒತ್ತುವರಿದಾರರು ಸರ್ವೆ ಇಲಾಖೆ ಸರ್ವೆ ಸರಿಯಾಗಿ ಮಾಡಿಲ್ಲ ಒಂದು ಕಡೆ ಮಾಡಿ ಮತ್ತೊಂದು ಕಡೆ ಮಾಡದೆ ತಾರತಮ್ಯ ಮಾಡಲಾಗಿದೆ. ನಾವು ರಾಜಕಾಲುವೆಯನ್ನು ಒತ್ತುವರಿ ಮಾಡಿಲ್ಲ. ಮತ್ತೊಮ್ಮೆ ಸರ್ವೆ ಮಾಡಿ. ಆಗ ಸತ್ಯಾಸತ್ಯ ಬಯಲಿಗೆ ಬರಲಿದೆ ಎಂದು ಆಗ್ರಹಿಸಿದರು.

ಈ ವೇಳೆ ರಾಜಕಾಲುವೆ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡಿರುವವರು ದೂರುದಾರರ ವಿರುದ್ಧ ತಿರುಗಿ ಬಿದ್ದರು. ಆಗ ಇಬ್ಬರ ನಡುವೆ ಮಾತಿನ ವಾಗ್ವಾದ ಸಹ ನಡೆಯಿತು. ಸರ್ವೆ ಇಲಾಖೆಯವರು ಇಲ್ಲದ ಕಾರಣ ಅವರನ್ನು ಕರೆಸಿ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಬಿದ್ದರೆ ಮರು ಸರ್ವೆ ಮಾಡಲಾಗುವುದು ಎಂದು ತಹಸೀಲ್ದಾರ್ ಸುಜಾತ ಭರವಸೆ ನೀಡಿದರು.

ಈ ವೇಳೆ ನಗರಸಭೆ ಆಯುಕ್ತ ಸತ್ಯನಾರಾಯಣ, ಆರ್‌ಐ ಅಜೇಯ್ ಇತರರು ಇದ್ದರು.