ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜೀವನದಲ್ಲಿ ಮಾನಸಿಕ ಒತ್ತಡದ ಜಂಜಾಟಗಳು ದೂರವಾಗಲು ಪ್ರತಿ ನಿತ್ಯ ಯೋಗ ಮಾಡಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಟಿಪ್ಪು ಬೇಸಿಗೆ ಅರಮನೆ ದರಿಯಾ ದೌಲತ್ ಉದ್ಯಾನವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಪ್ರಸ್ತುತ ಕಾಲಮಾನದ ದಿನಚರಿಯಲ್ಲಿ ಜನರ ದೈಹಿಕ ಶ್ರಮದಾನದಿಂದ ಒತ್ತಡಗಳು ಕಡಿಮೆಯಾಗುವ ಜೊತೆಗೆ ಹೆಚ್ಚು ಉತ್ಸಾಹಿ ಕಾರ್ಯ ಚಟುವಟಿಕೆಗಳಿಂದ ಜೀವನ ಸಾಗಿಸಬಹುದು ಎಂದರು.

ನಮ್ಮ ಪೂರ್ವಿಕರು ಪ್ರಾಚೀನ ಕಾಲದಲ್ಲಿಯೇ ಯೋಗ ಮಾಡುವುದನ್ನು ಅಳವಡಿಸಿಕೊಂಡು ದೀರ್ಘಕಾಲ ಬದುಕುತಿದ್ದರು. ನಾವುಗಳು ಸಹ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಯೋಗಭ್ಯಾಸ ಮಾಡುವುದರಿಂದ ಹೆಚ್ಚು ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದರು.

ಶಾಸಕರು ಸ್ವತಃ ಸೂರ್ಯ ನಮಸ್ಕಾರ, ಪದ್ಮಾಸನ, ಏಕಪಾದಾಸನ, ಗರುಡಾಸನ, ತ್ರಿಕೋನಾಸನ, ವಜ್ರಾಸನ ಹಾಗೂ ವೀರಭದ್ರಾಸನ ಸೇರಿದಂತೆ ಅನೇಕ ಆಸನಗಳನ್ನು ಮಾಡಿ ಗಮನ ಸೆಳೆದರು.


ಈ ವೇಳೆ ತಹಸೀಲ್ದಾರ್ ಚೇತನಾ ಯಾದವ್ ಮತ್ತು ಆಯುರ್ವೇದಿಕ್ ಆಸ್ಪತ್ರೆ ಹಿರಿಯ ವೈದ್ಯ ಲೋಕೇಶ್ ಉಪಸ್ಥಿತರಿದ್ದರು. ಜ್ಯೋತಿ ನಿವಾಸ ಶಾಲೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಆರೋಗ್ಯಕರ ಜೀವನ ಶೈಲಿಗೆ ಯೋಗ ಅಗತ್ಯ: ಎಂ.ಎಂ.ಮಹೇಂದ್ರ

ಕನ್ನಡಪ್ರಭ ವಾರ್ತೆ ಮಳವಳ್ಳಿಜನಸಾಮಾನ್ಯರ ಬದುಕಿನಲ್ಲಿ ಆರೋಗ್ಯಕರ ಜೀವನ ಶೈಲಿಗೆ ಪ್ರತಿಯೊಬ್ಬರೂ ಯೋಗದ ಭಾಗವಾಗಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ತಿಳಿಸಿದರು.

ಪಟ್ಟಣದ ಭಕ್ತಕನಕದಾಸ ಕ್ರೀಡಾಂಗಣದಲ್ಲಿ ಭಾನುವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಡೆದ ಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಾವೆಲ್ಲರೂ ಮುಂದಿನ ಪೀಳಿಗೆಗೆ ಯೋಗವನ್ನು ಕೊಡುಗೆಯಾಗಿ ನೀಡಬೇಕು. ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಒಗ್ಗೂಡಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಪ್ರತಿನಿತ್ಯ ಯೋಗದ ಅಭ್ಯಾಸ ಉತ್ತಮ ಆರೋಗ್ಯದ ಅಡಿಪಾಯವಾಗುತ್ತದೆ. ನಾವು ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕು. ತಾಲೂಕಿನಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದರಿಂದ ಕೃತ್ಯದಲ್ಲಿ ಭಾಗಿಯಾಗುವವರನ್ನು ಮನವೊಲಿಸಿ ತಂದು ಯೋಗದ ಜ್ಞಾನವನ್ನು ಬೆಳೆಸಬೇಕು ಎಂದರು.ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ಯೋಗ ಮತ್ತು ಪರಿಸರದ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಮೂಡಬೇಕಿದೆ. ಒಂದು ಮರ ಕಡಿದರೆ ಆರು ಗಿಡಗಳನ್ನು ನೆಡಬೇಕೆಂದು ಕಾನೂನು ರೂಪಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಲು ಯುವಕರು ಮುಂದೆ ಬರಬೇಕು. ನಮ್ಮ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಉಚಿತವಾಗಿ ಯೋಗವನ್ನು ಹೇಳಿಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ ವೇಣುಗೋಪಾಲ್, ಘನ ಶಾಮ್, ಕೃಷ್ಣ, ರೂಪ, ಶಶಿಕಲಾ, ಸುರೇಶ್, ಶ್ರೀನಿಧಿ, ನಾಗೇಂದ್ರ ಪಾಲ್ಗೊಂಡಿದ್ದರು.