ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿ: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ

| Published : Feb 04 2024, 01:30 AM IST

ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿ: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಲ್ಲಿ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪಾತ್ರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ರ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಸಾರ್ವಜನಿಕರು ತಮ್ಮ ಕೆಲಸ ಅಥವಾ ಸಮಸ್ಯೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬಂದಾಗ ಸರ್ಕಾರಿ ನೌಕರರು ತಾಳ್ಮೆಯಿಂದ ಆಲಿಸಿ ವಿಳಂಬವಿಲ್ಲದೆ ಪ್ರಾಮಾಣಿಕವಾಗಿ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಅವರ ಕೆಲಸ ಮಾಡಿ ಕೊಡಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.

ಅವರು ಶನಿವಾರ ನಗರದ ಮಣಿಪಾಲದ ಜಿಲ್ಲಾ ಪಂಚಾಯಿತಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲೂಕು ಮತ್ತು ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪಾತ್ರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ರ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರು ಗೌರವಯುತವಾಗಿ ಬದುಕಬೇಕೆಂಬುದೇ ನಮ್ಮ ಸಂವಿಧಾನದ ಅಶೋತ್ತರವಾಗಿದೆ. ಇದನ್ನು ಮನಗೊಂಡು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸರ್ಕಾರಿ ನೌಕರರು ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸಬೇಕು ತಮ್ಮ ಕೆಲಸಗಳನ್ನು ಅರಸಿ ಕಚೇರಿಗೆ ಸಾರ್ವಜನಿಕರು ಬಂದಾಗ ನಿಯಾನುಸಾರ ಸಕಾಲದಲ್ಲಿ ಅವರ ಕೆಲಸಗಳನ್ನು ಮಾಡಿಕೋಡಬೇಕು ಎಂದರು.

ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಕೊಳ್ಳಲು ಅರ್ಜಿ ಸಲ್ಲಿಸಿದಾಗ ಅವರಿಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಒಮ್ಮೆಲೇ ಒದಗಿಸಲು ಸೂಚಿಸಬೇಕು. ಪದೇಪದೆ ಒಂದೊಂದೆ ದಾಖಲೆಗಳನ್ನು ಒದಗಿಸಲು ತಿಳಿಸಿದಾಗ ಅಧಿಕಾರಿಗಳ ಮೇಲೆ ಸಂದೇಹ ಪಟ್ಟು ಏನೋ ಉದ್ದೇಶದಿಂದ ಹೀಗೇ ಮಾಡುತ್ತಿದ್ದಾರೆ ಎಂದು ತಿಳಿದು ಲೋಕಾಯುಕ್ತರನ್ನು ಸಂಪರ್ಕಿಸಲು ಮುಂದಾಗುವ ಸಾಧ್ಯತೆ ಇರುತ್ತದೆ ಇದಕ್ಕೆ ಆಸ್ಪದ ನೀಡಬಾರದು ಎಂದರು.

ಮಹಾತ್ಮ ಗಾಂಧೀಜಿ ಅವರು ಎರಡು ಕನಸುಗಳು ಹೊಂದಿದ್ದರು. ಮೊದಲನೇಯದ್ದು ಆಂಗ್ಲರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಒದಗಿಸುವುದು ಇದು 1947ರಲ್ಲೇ ನನಸಾದರೆ ಅವರ ಎರಡನೇ ಕನಸಾದ ತಾರತಮ್ಯವಿಲ್ಲದೆ ದುರ್ಬಲದವರಿಗೆ ಸಹಾಯಹಸ್ತ ನೀಡುವುದು ಆಗಿತ್ತು. ಆದರೆ ಅದು ಇದುವರೆಗೂ ನನಸಾಗಿರುವುದಿಲ್ಲ. ಈ ಕಾರ್ಯವನ್ನು ಸರ್ಕಾರಿ ನೌಕರರಾದ ನಾವುಗಳು ಮಾಡಬೇಕಿದೆ ಎಂದರು.

ಸರ್ಕಾರಿ ನೌಕರರು ಕೆ.ಸಿ.ಎಸ್.ಆರ್. ಕಾಯ್ದೆಯ ಅರಿವು ಹೊಂದಿದ ರೀತಿಯಲ್ಲಿಯೇ ಲೋಕಾಯುಕ್ತ ಕಾನೂನಿನ ಬಗ್ಗೆ ಅರಿವನ್ನು ಹೊಂದುವುದು ಅತ್ಯವಶ್ಯಕವಾಗಿದೆ ಎಂದ ಅವರು, ಲೋಕಾಯುಕ್ತ ಪ್ರಕರಣಗಳು ನ್ಯಾಯಾಲಯದ ಪ್ರಕರಣದಂತೆ ನಡೆಯುತ್ತವೆ. ಆರೋಪಗಳಿಗೆ ಉತ್ತರಿಸಲು ಸ್ವಾಭಾವಿಕ ನ್ಯಾಯ ಒದಗಿಲಾಗುವುದು ಎಂದರು.

ಸರ್ಕಾರಿ ನೌಕರರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ಸೃಜನ ಪಕ್ಷಪಾತತೆ, ತಾರತಮ್ಯ, ದುರ್ನಡತೆ ತೋರದೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಆತ್ಮಸ್ಥೈರ್ಯದಿಂದ ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಲೋಕಾಯುಕ್ತ ಪ್ರಕರಣಗಳು ಸರ್ಕಾರಿ ನೌಕರರ ಮೇಲೆ ದಾಖಲಾದಾಗ ನಡೆಯುವ ಪ್ರಕ್ರಿಯೆಗಳ ಬಗ್ಗೆ ಸವಿಸ್ತಾರವಾಗಿ ಉದಾಹರಣೆಗಳೊಂದಿಗೆ ವಿವರಿಸಿ ಮಾಹಿತಿ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಶಾಂತವೀರ ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಲೋಕಾಯುಕ್ತ ಪ್ರಕರಣಗಳು ನಮ್ಮ ನ್ಯಾಯಾಲಯದಲ್ಲಿ ಅತ್ಯಂತ ಕಡಿಮೆ ಇವೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಶೂನ್ಯವಾಗಬೇಕು. ಎಲ್ಲ ಸರ್ಕಾರಿ ನೌಕರರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಸರ್ಕಾರಿ ನೌಕರರಿಗೆ ಸಾರ್ವಜನಿಕ ಜವಾಬ್ದಾರಿ ಇದ್ದು ಇದನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಯಾವುದೇ ರೀತಿಯ ಲೋಪಕ್ಕೆ ಅವಕಾಶ ನೀಡಬಾರದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ. ಸೈಮನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ರಾಜ್ಯ ಲೋಕಾಯುಕ್ತ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಕುಂದಾಪುರ ಡಿಸಿಎಫ್ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಮ್ ಬಾಬು, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿದರು.

****