- ವಿಶಿಷ್ಠ ಅಲಂಕಾರ ನಡೆಸಿ, ವಾದ್ಯಗಳೊಂದಿಗೆ ಆಚರಣೆ
ಕನ್ನಡಪ್ರಭ ವಾರ್ತೆ ಶಿರಾಮಳೆರಾಯನ ಕೋಪದಿಂದ ಬರಡಾಗಿರುವ ಭೂಮಿಯನ್ನು ಕಾಪಾಡಲು ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯ್ತಿಯ ಬಡಮಂಗನಹಟ್ಟಿಯ ಗ್ರಾಮಸ್ಥರು ಕತ್ತೆ ಮೆರವಣಿಗೆ ನಡೆಸಿ ದೇವರಲ್ಲಿ ವಿಶಿಷ್ಠ ರೀತಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರು.ಗ್ರಾಮದಲ್ಲಿ ರಾತ್ರಿ ವೇಳೆ ಒಗ್ಗೂಡಿದ ಗ್ರಾಮಸ್ಥರು, ಕತ್ತೆಗೆ ವಿಶೇಷವಾಗಿ ಬಟ್ಟೆ, ಹೂವಿನ ಹಾರಗಳನ್ನು ಹಾಕಿ ಶೃಂಗಾರ ಮಾಡಿದ್ದರು. ಅಂತಾರಾಷ್ಟ್ರೀಯ ಅರೆವಾದ್ಯ ಕಲಾವಿದ ನರಸಿಂಹರಾಜು ಬಿ.ಕೆ ಮತ್ತು ಕೃಷ್ಣಮೂರ್ತಿ ಎನ್.ಜಿ ಅವರು ತಮ್ಮ ವಾದ್ಯ ಮೇಳದೊಂದಿಗೆ ಡೋಲು, ತಮಟೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ಸದ್ದಿನೊಂದಿಗೆ ಹಾಗೂ ಉರಿಯುವ ಪಂಜುಗಳನ್ನು ಹಿಡಿದು ಗ್ರಾಮದ ಬೀದಿಗಳಲ್ಲಿ ಕತ್ತೆಯ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಿದರು. ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಅಂತರ್ಜಲ ಕುಸಿಯುತ್ತಿದೆ. ವರುಣ ದೇವನು ಕರುಣಿಸಿ, ಶೀಘ್ರವೇ ಉತ್ತಮ ಮಳೆ ಸುರಿಸಲಿ, ಕೆರೆ-ಕುಂಟೆಗಳು ತುಂಬಿ ನಾಡು ಸುಭಿಕ್ಷವಾಗಲಿ ಎಂದು ಗ್ರಾಮಸ್ಥರು ದೇವರಲ್ಲಿ ಮೊರೆಯಿಟ್ಟರು. ಗ್ರಾಮೀಣ ಭಾಗದ ನಂಬಿಕೆ ಹಾಗೂ ಸಂಪ್ರದಾಯದ ಪ್ರತೀಕವಾಗಿ ಈ ಆಚರಣೆ ನಡೆಯಿತು.ಈ ವಿಶಿಷ್ಟ ಮೆರವಣಿಗೆ ಹಾಗೂ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಚಂಗಾವರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ತಿಮ್ಮಣ್ಣ, ಮಾಜಿ ಅಧ್ಯಕ್ಷರಾದ ನಾಗಮ್ಮ, ಕಾರನಾಗಪ್ಪ, ಮೂಡಲಗಿರಿಯಪ್ಪ ಹಾಗೂ ಗ್ರಾಮದ ಮುಖಂಡರಾದ ಗಿರೀಶ್, ಮಂಜುನಾಥ್, ವೀರೇಂದ್ರ, ಮಾರಣ್ಣ, ಚಿದಾನಂದ, ಈರಣ್ಣ, ಮಂಜುನಾಥ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
---13ಶಿರಾ2
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡಮಂಗನಹಟ್ಟಿಯಲ್ಲಿ ಗ್ರಾಮಸ್ಥರು ಮಳೆಗಾಗಿ ಕತ್ತೆ ಮೆರವಣಿಗೆ ನಡೆಸಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರು.