ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ಒಂದು ಸಮುದಾಯದ ಪರಿಶ್ರಮ, ಸೇವಾ ಮನೋಭಾವ ಮತ್ತು ಸಂಘಟಿತ ಶಕ್ತಿಯ ಪ್ರತೀಕವಾಗಿ ನಿಂತಿರುವ ಸಂಸ್ಥೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿವೆ ಎಂದು ಸಂಸದ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.ನಗರದ ಬಿ.ಬಿ. ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ನಡೆದ ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಇದು ಕೇವಲ ವಾಣಿಜ್ಯ ಸಂಕೀರ್ಣವಲ್ಲ. ಇದು ಒಕ್ಕಲುತನದ ಸಂಕೇತ. ಇದು ನಮ್ಮ ಸಮುದಾಯದ ಆತ್ಮವಿಶ್ವಾಸದ ಪ್ರತೀಕ. ಇದು ನಮ್ಮ ಬೇರುಗಳನ್ನು ಮರೆಯದೇ ಭವಿಷ್ಯದ ಕಡೆ ಸಾಗುವ ಸಂಕಲ್ಪವಾಗಿದೆ. ಒಕ್ಕಲಿಗರ ಕಲ್ಯಾಣ ಮಂಟಪ, ಕೆಂಪೇಗೌಡ ಕಾನೂನು ಮಹಾವಿದ್ಯಾಲಯ ಹಾಗೂ ಒಕ್ಕಲಿಗರ ವಿದ್ಯಾರ್ಥಿ ನಿಲಯ ಕೂಡ ಹೊಸದಾಗಿ ನಿರ್ಮಾಣವಾಗುತ್ತಿರುವುದು ಸಮಾಜದ ದೂರದೃಷ್ಟಿ ಮತ್ತು ಸಂಘಟಿತ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಒಕ್ಕಲುತನ ಅಂದರೆ ಅದು ಕೇವಲ ಜಾತಿ ಅಥವಾ ಸಮುದಾಯವಲ್ಲ. ಅದು ಒಂದು ಜವಾಬ್ದಾರಿ. ಒಂದು ಬದುಕಿನ ಮೌಲ್ಯ ಒಕ್ಕಲಿಗ ಸಮುದಾಯದ ಇತಿಹಾಸ ಎಂದರೆ ಅದು ಕೇವಲ ಒಂದು ಸಮುದಾಯದ ಇತಿಹಾಸವಲ್ಲ. ಅದು ಕನ್ನಡ ನಾಡಿನ ಇತಿಹಾಸ. ನಾಡಪ್ರಭು ಶ್ರೀ ಕೆಂಪೇಗೌಡರು ಬೆಂಗಳೂರಿಗೆ ಅಡಿಪಾಯ ಹಾಕಿದರೆ, ಕೆಂಗಲ್ ಹನುಮಂತಯ್ಯ ವಿಧಾನಸೌಧದ ಮೂಲಕ ಕನ್ನಡದ ಗಂಭೀರತೆಯನ್ನು ಕಟ್ಟಿದರು. ಎಸ್.ಎಂ. ಕೃಷ್ಣ ಅವರು ಬೆಂಗಳೂರನ್ನು ಜಗತ್ತಿನ ತಂತ್ರಜ್ಞಾನ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದರು ಎಂದು ಸಂಸದರು ತಿಳಿಸಿದರು.ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವ ಡಾ.ಎಂ. ಸಿ.ಸುಧಾಕರ್, ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಕಾರ್ಯದರ್ಶಿ ಚನ್ನಪ್ಪರೆಡ್ಡಿ ಮತ್ತಿತರರು ಇದ್ದರು.
ಬಾಕ್ಸ್...
ಮೊಬೈಲು ಗೀಳು ಬಿಡಿ
ಯುವಕರಿಗೆ ಮೊಬೈಲ್‌ನಲ್ಲಿ ಸಮಯ ಕಳೆಯುವುದಕ್ಕಿಂತ ಸಮಾಜಕ್ಕಾಗಿ ಸಮಯ ಕೊಡಿ. ಕೇವಲ ಉದ್ಯೋಗ ಹುಡುಕುವವರಾಗಬೇಡಿ .ಉದ್ಯೋಗ ಕೊಡುವವರಾಗಿರಿ. ಉದ್ಯಮ ಶೀಲತೆ ನಮ್ಮ ಡಿಎನ್ಎಯಲ್ಲೇ ಇದೆ. ನಾವು ಮನಸ್ಸು ಮಾಡಿದರೆ ಪ್ರತಿ ಹಳ್ಳಿಯೂ ಒಂದು ಉದ್ಯಮ ಉತ್ತೇಜನ ಕೇಂದ್ರಗಳಾಗಬಹುದು. ಗ್ರಾಮೀಣ ಉದ್ಯಮಿಗಳನ್ನು ಬೆಳೆಸಬೇಕು. ಮಹಿಳೆಯರ ಉದ್ಯಮಗಳಿಗೆ ಬೆಂಬಲ ಕೊಡಬೇಕು. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ಓದಿಸಿ, ಬೆಳಗಿಸಿ ಎಂಬ ಮನೋಭಾವ ನಮ್ಮದಾಗಬೇಕು. ಪ್ರತಿಯೊಬ್ಬ ಯಶಸ್ವಿ ಒಕ್ಕಲಿಗರೂ ಕನಿಷ್ಠ ಒಂದು ಬಡ ವಿದ್ಯಾರ್ಥಿಯ ಜವಾಬ್ದಾರಿ ತೆಗೆದುಕೊಳ್ಳಬೇಕು.ಒಂದು ಕುಟುಂಬವನ್ನು ಮೇಲಕ್ಕೆತ್ತಬೇಕು ಎಂದು ಸಂಸದರು ಮನವಿ ಮಾಡಿದರು.