ಕನ್ನಡಪ್ರಭ ವಾರ್ತೆ ಹಾಸನ
ತಾಯಿಯ ಪ್ರೀತಿ, ಮಮತೆ, ತ್ಯಾಗ ಮತ್ತು ನಿಸ್ವಾರ್ಥ ಸೇವೆಗೆ ಸಮಾನವಾದದ್ದು ಜಗತ್ತಿನಲ್ಲಿ ಮತ್ತೊಂದಿಲ್ಲ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ತಾಯಂದಿರ ತ್ಯಾಗ ಮತ್ತು ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಜಿ.ಕೆ. ದಾಕ್ಷಾಯಿಣಿ ಅಭಿಪ್ರಾಯಪಟ್ಟರು.ನಗರದ ಭಾರತ್ ಸ್ಕೌಟ್ಸ್ ಗೈಡ್ಸ್ ಸಮುದಾಯ ಭವನದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಅಮ್ಮಂದಿರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಅಮ್ಮ ಎನ್ನುವ ಪದಕ್ಕೆ ಜಗತ್ತಿನಲ್ಲಿ ಅಪಾರವಾದ ಶಕ್ತಿ ಮತ್ತು ಭಾವನಾತ್ಮಕ ಮೌಲ್ಯವಿದೆ. ನೂರು ಜನ್ಮ ಕಳೆದರೂ ತಾಯಿಯ ಋಣ ತೀರಿಸಲಾಗದು ಎಂಬ ಮಾತು ಸಮಾಜದಲ್ಲಿ ಅತಿ ದೊಡ್ಡ ಸತ್ಯವಾಗಿದೆ. ಮಕ್ಕಳ ಸುಖಕ್ಕಾಗಿ ತನ್ನ ಆಸೆ, ಕನಸು, ಆರೋಗ್ಯ ಎಲ್ಲವನ್ನೂ ಬದಿಗಿರಿಸಿ ಜೀವನವನ್ನೇ ಅರ್ಪಿಸುವ ಮಹಾನ್ ವ್ಯಕ್ತಿ ತಾಯಿ. ಕುಟುಂಬದ ಆಧಾರಸ್ತಂಭವಾಗಿರುವ ತಾಯಂದಿರ ಸೇವೆಯನ್ನು ಗೌರವಿಸುವ ಸಲುವಾಗಿ ವಿಶ್ವದಾದ್ಯಂತ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಈ ದಿನ ಕೇವಲ ಶುಭಾಶಯ ವಿನಿಮಯಕ್ಕೆ ಸೀಮಿತವಾಗಬಾರದು. ತಾಯಂದಿರ ಕಷ್ಟ, ಅವರ ಜೀವನದ ಹೋರಾಟ, ಕುಟುಂಬಕ್ಕಾಗಿ ಅವರು ಸಲ್ಲಿಸುವ ಮೌನ ಸೇವೆಗಳನ್ನು ಮನದಾಳದಿಂದ ಅರ್ಥಮಾಡಿಕೊಳ್ಳುವ ದಿನವಾಗಬೇಕು. ಪ್ರತಿಯೊಬ್ಬ ಮಗುವಿನ ಯಶಸ್ಸಿನ ಹಿಂದೆ ತಾಯಿಯ ತ್ಯಾಗ ಅಡಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವಗಳನ್ನು ನಿರ್ಮಿಸುವಲ್ಲಿ ತಾಯಿಯ ಪಾತ್ರ ಅಪಾರವಾಗಿದೆ ಎಂದು ಹೇಳಿದರು.
+ಮಲ್ನಾಡ್ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಎ. ಸಾವಿತ್ರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಅನೇಕ ತಾಯಂದಿರು ಕುಟುಂಬದ ಜವಾಬ್ದಾರಿ, ಮಕ್ಕಳ ಆರೈಕೆ ಹಾಗೂ ಮನೆಯ ಕೆಲಸಗಳ ನಡುವೆಯೇ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಆರಂಭದಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸಮಸ್ಯೆಗಳನ್ನು ಕಡೆಗಣಿಸುವುದರಿಂದ ನಂತರ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹಲವರು ನೋವನ್ನು ಸಹಿಸಿಕೊಂಡೇ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುತ್ತಾರೆ. ಆಗಾಗಲೇ ಪರಿಸ್ಥಿತಿ ಕೈಮೀರಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಪ್ರಮುಖ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, ಮುಖ್ಯವಾಗಿ ಋತುಬಂಧದ ನಂತರದ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಚಿಕಿತ್ಸೆಯಿಂದ ಸಂಪೂರ್ಣ ಗುಣಪಡಿಸಬಹುದು. ಅಸಾಮಾನ್ಯ ರಕ್ತಸ್ರಾವ, ಶ್ರೋಣಿಭಾಗದಲ್ಲಿ ನೋವು, ಅಸಹಜ ವಿಸರ್ಜನೆ ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು. ಸ್ತನ ಕ್ಯಾನ್ಸರ್ ಕೂಡ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಅಪಾಯಕಾರಿ ಕಾಯಿಲೆಯಾಗಿದ್ದು, ಸ್ತನದಲ್ಲಿ ಗಡ್ಡೆ, ನೋವು ಅಥವಾ ಅಸಹಜ ಬದಲಾವಣೆ ಕಂಡುಬಂದರೆ ನಿರ್ಲಕ್ಷಿಸಬಾರದು. ಪ್ರತಿಯೊಬ್ಬ ಮಹಿಳೆಯೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.ಇದೇ ವೇಳೆ ಪುರುಷರಿಗೂ ಕಿವಿಮಾತು ಹೇಳಿದ ಅವರು, ಅಮ್ಮಂದಿರ ದಿನಾಚರಣೆ ಕೇವಲ ಮಹಿಳೆಯರಿಗಾಗಿ ಮಾತ್ರವಲ್ಲ. ಪ್ರತಿಯೊಬ್ಬ ಪುರುಷನು ತನ್ನ ತಾಯಿ, ಅಕ್ಕ, ತಂಗಿ, ಪತ್ನಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಹಿಳೆಯರ ಆರೋಗ್ಯವೇ ಕುಟುಂಬದ ಆರೋಗ್ಯವಾಗಿದೆ ಎಂದು ಹೇಳಿದರು. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಭಾರತದಲ್ಲಿ ತಾಯಂದಿರ ದಿನವು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಎಂದರು. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ದೇವಿಯ ಸ್ಥಾನಮಾನ ನೀಡಲಾಗಿದೆ. ತಾಯಿಯ ಮಮತೆ, ಸಹನೆ ಮತ್ತು ಮಾರ್ಗದರ್ಶನವೇ ಮಕ್ಕಳ ಬದುಕಿಗೆ ದಾರಿದೀಪವಾಗುತ್ತದೆ. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಕುಟುಂಬ ಸದಸ್ಯರ ನಡುವೆ ಭಾವನಾತ್ಮಕ ಬಂಧಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಆಚರಣೆಗಳು ತಾಯಿಯ ಮಹತ್ವವನ್ನು ಮತ್ತೆ ನೆನಪಿಸುತ್ತವೆ ಎಂದು ಹೇಳಿದರು. ಇತ್ತೀಚೆಗೆ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ತಿಳಿಸುವುದರ ಮೂಲಕ ಅಮ್ಮಂದಿರ ದಿನವನ್ನು ಆಚರಿಸುತ್ತಿದ್ದಾರೆ. ಆದರೆ ತಾಯಿಯೊಂದಿಗೆ ಸಮಯ ಕಳೆಯುವುದು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೇ ನಿಜವಾದ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಉಪಾಧ್ಯಕ್ಷೆ ಎಂ.ಬಿ. ಗಿರಿಜಾಂಬಿಕ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಂದಿರ ಸೇವೆ ಮತ್ತು ಸಮಾಜದಲ್ಲಿ ಅವರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ವೇದಿಕೆಯಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಜಯರಮೇಶ್, ಆಲೂರು ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಜಿಲ್ಲಾ ತರಬೇತಿ ಆಯುಕ್ತ ಎಂ.ಎಸ್. ಪ್ರಕಾಶ್, ಹಿರಿಯ ಗೈಡ್ ಕ್ಯಾಪ್ಟನ್ ಎಚ್.ಜಿ. ಕಾಂಚನಮಾಲ, ಜಿಲ್ಲಾ ಖಜಾಂಚಿ ಆರ್.ಎಸ್. ರಮೇಶ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಶಿಬಿರ ನಾಯಕಿ ಬಿ.ಎಲ್. ಮಮತ, ಸಂಪನ್ಮೂಲ ವ್ಯಕ್ತಿ ಸೋಫಿಯಾ ಫರ್ನಾಂಡಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಗೈಡ್ ಕ್ಯಾಪ್ಟನ್ ಲತಾಮಣಿ ಎಂ.ಕೆ. ತುರುವೇಕೆರೆ ನಿರ್ವಹಿಸಿದರು.