ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಒಕ್ಕಲಿಗ ಸಮುದಾಯ ಕೇವಲ ಒಕ್ಕಲುತನ ಮಾಡಿಕೊಂಡು ಇಲ್ಲ. ಇಂದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಒಕ್ಕಲಿಗರು ಎಲ್ಲಾ ರಂಗಗಳಲ್ಲಿಯೂ ಮುಂದುವರಿದಿದ್ದು ಉದ್ಯಮ ಕ್ಷೇತ್ರದಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ನಗರದ ಬಿ.ಬಿ. ರಸ್ತೆಯ ಒಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ನಡೆದ ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಒಕ್ಕಲಿಗ ಮಹಿಳೆಯರಂತೂ ಉದ್ಯಮ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವುದು ಅಭಿನಂದನೀಯ. ಒಕ್ಕಲಿಗರ ವೃತ್ತಿ ಯಾವುದಾದರೂ ಗೌರವಯುತವಾಗಿ ಬದುಕಿ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಮತ್ತು ಅವರಿಂದ ಸಮಾಜಕ್ಕೆ ಉತ್ತಮ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆಂದರು.

ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಡಾ.ನಿರ್ಮಲಾನಂದ ಶ್ರೀಗಳ ದೂರದೃಷ್ಟಿಯ ಫಲ ಇಂದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಸರ್ಕಾರ ಮಾಡಬೇಕಾದ ಸಾಧ್ಯತೆಗಳಾದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಅಂಧ ಮಕ್ಕಳಿಗಾಗಿ ಶಾಲೆಗಳು, ಪೋಷಕರಿಲ್ಲದ, ಅಶಕ್ತ, ಪ್ರತಿಭಾವಂತ ಬಡ ಮಕ್ಕಳಿಗಾಗಿ ಉಚಿತ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಿಂತ ಕೊಂಚ ಹೆಚ್ಚು ದರದಲ್ಲಿ ತಮ್ಮ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಸ್ವಾಮೀಜಿ ನೀಡುತ್ತಿರುವುದು ಶ್ಲಾಘನೀಯ ಎಂದರು.