ಕತ್ತೆ ಹಾಲು ವಂಚನೆ ಪ್ರಕರಣ: ಮೂವರ ಬಂಧನ

| Published : Oct 08 2024, 01:08 AM IST

ಸಾರಾಂಶ

ಮೂವರು ಆರೋಪಿಗಳನ್ನು ವಿಜಯನಗರ ಜಿಲ್ಲಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹೊಸಪೇಟೆ: ಕತ್ತೆ ಹಾಲು ಮಾರಾಟ ಕಂಪನಿ ಹೆಸರಿನಲ್ಲಿ ರೈತರಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿದ್ದ ಆರೋಪದಲ್ಲಿ ಮೂವರು ಆರೋಪಿಗಳನ್ನು ವಿಜಯನಗರ ಜಿಲ್ಲಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಜೆನ್ನಿ ಮಿಲ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಂಧ್ರಪ್ರದೇಶದ ನೆಲ್ಲೂರಿನ ನೂತಲಪಾಟಿ ಮುರುಳಿ(೪೩), ಮ್ಯಾನೇಜರ್ ಕಡಪದ ಉಮಾಶಂಕರ್ ರೆಡ್ಡಿ (೩೩), ಕಡಪದ ಸಯ್ಯದ್ ಮಹಮ್ಮದ್ ಗೌಸ್(೨೭) ಬಂಧಿತ ಆರೋಪಿಗಳು.

ಈ ಕುರಿತು ನಗರದ ಪಟ್ಟಣ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಪ್ರಕರಣ ಭೇದಿಸಲು ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಗೋವಾ, ಉತ್ತರ ಭಾರತದ ಹಿಮಾಚಲಪ್ರದೇಶ, ಹರ್ಯಾಣ, ಉತ್ತರಪ್ರದೇಶ, ದಿಲ್ಲಿ, ಪಂಜಾಬ್ ಸೇರಿದಂತೆ ವಿವಿಧೆಡೆ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿತ್ತು. ಆರೋಪಿಗಳು ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಾ ತಲೆ ಮರೆಸಿಕೊಂಡಿದ್ದರು. ಕೊನೆಗೂ ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದರು.

ಕಳೆದ ಮೇ ತಿಂಗಳಿಂದ ನಗರದಲ್ಲಿ ಜೆನ್ನಿ ಮಿಲ್ಕ್ ಕಂಪನಿ ತೆರೆದು, ರಾಜ್ಯದ ಏಳೆಂಟು ಜಿಲ್ಲೆಗಳ ರೈತರಿಂದ ಒಂದು ಯುನಿಟ್ ಕತ್ತೆಗಳಿಗೆ ತಲಾ ೩ ಲಕ್ಷ ರು. ಪಡೆದು ತಲಾ ಮೂರು ಕತ್ತೆಗಳು, ಮೂರು ಮರಿಗಳನ್ನು ನೀಡಿದ್ದಾರೆ. ಪ್ರತಿ ಯುನಿಟ್ ಕತ್ತೆಗಳ ಮಾರಾಟ ಮಾಡಿ ಸುಮಾರು ₹೧೪.೬೩ ಕೋಟಿ ವಂಚಿಸಿದ್ದಾರೆ. ಈ ಕುರಿತು ೩೧೮ ಜನರು ದಾಖಲೆ ಸಮೇತ ನಗರದ ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಒಂದು ಲೀಟರ್ ಕತ್ತೆ ಹಾಲಿಗೆ ₹೨,೩೫೦ ನೀಡುವುದಾಗಿ ನಂಬಿಸಿದ್ದರು. ಈಗ ಪ್ರಕರಣದ ಮೋಸದ ಜಾಲ ಹೊರಬಿದ್ದಿದ್ದು, ರೈತರು ಪೊಲೀಸರ ಮೊರೆ ಹೋಗಿದ್ದಾರೆ.

ಕಳೆದ ೧೯ ದಿನಗಳಿಂದ ವಿವಿಧ ರಾಜ್ಯಗಳಲ್ಲಿ ಪೊಲೀಸರು ಶೋಧ ನಡೆಸಿದ್ದರು. ತಲೆ ಮರೆಸಿಕೊಂಡಿದ್ದ ಆರೋಪಿಗಳು ಯಾವುದೋ ದಾಖಲೆಗಳಿಗಾಗಿ ಹೊಸಪೇಟೆ ಕಚೇರಿಗೆ ಆಗಮಿಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಿ, ಬಳಿಕ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಶ್ರೀಹರಿಬಾಬು ಮಾಹಿತಿ ನೀಡಿದರು.

ಪ್ರಕರಣದಲ್ಲಿ ರೈತರಿಗೆ ಮೋಸವಾಗಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಸಿಐಡಿಗೆ ಒಪ್ಪಿಸಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.

ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆ ಪಿಐ ಲಖನ್ ಆರ್. ಮಸಗುಪ್ಪಿ, ಚಿತ್ತವಾಡ್ಗಿ ಪಿಐ ಅಶ್ವತ್ಥನಾರಾಯಣ, ಪಿಎಸ್‌ಐ ಕೆ.ರಾಜಶೇಖರ್, ಎಚ್‌ಸಿಗಳಾದ ಬಿ. ರಾಘವೇಂದ್ರ, ಜಾವೇದ್ ಅಶ್ರಫ್, ನಿಂಗರಾಜ, ಕೆ. ಸಿದ್ದಪ್ಪ, ಕೆ.ಶ್ರೀರಾಮರೆಡ್ಡಿ, ಪೇದೆಗಳಾದ ಪರಶು ನಾಯ್ಕ, ಜೆ. ಕೊಟ್ರೇಶ್, ಜೆ. ಫಕ್ಕೀರಪ್ಪ, ಕೊಟ್ರೇಶ್, ಮಲಕಜ್ಜಪ್ಪ, ಶಿವು, ಎಂ. ಕೊಟ್ರಮ್ಮ, ಮಹೇಶ್ ಜೋಳದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.