ವಿಜಯೇಂದ್ರ ಕನಸು ಯಾವತ್ತೂ ನಿಜವಾಗಲ್ಲ: ಶಾಸಕ ಶಿವಲಿಂಗೇಗೌಡ

| Published : Oct 08 2024, 01:08 AM IST

ಸಾರಾಂಶ

ಹಾಸನ : ಕನಸುಗಳು ನಿಜ ಆಗುವುದು ಕಷ್ಟ. ಯಾವತ್ತೂ ಕನಸುಗಳು ನಿಜ ಆಗಲ್ಲ. ಕನಸು ಕನಸಾಗಿಯೇ ಉಳಿಯುವುದು ಸ್ವಾಭಾವಿಕ. ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವ ಅಧಿಕಾರ ಯಾರಿಗೂ ಇಲ್ಲ. ಅದರಲ್ಲೂ ವಿಜಯೇಂದ್ರ ಅವರು ಯಾವ ಸಮಯದಲ್ಲಿ ಕನಸು ಕಂಡಿದ್ದಾರೆ ಎನ್ನುವುದನ್ನು ಹೇಳಲಿ ಎಂದು ವಿಜಯೇಂದ್ರ ಹೇಳಿಕೆಗೆ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಲೇವಡಿ ಮಾಡಿದರು.

ಹಾಸನ : ಕನಸುಗಳು ನಿಜ ಆಗುವುದು ಕಷ್ಟ. ಯಾವತ್ತೂ ಕನಸುಗಳು ನಿಜ ಆಗಲ್ಲ. ಕನಸು ಕನಸಾಗಿಯೇ ಉಳಿಯುವುದು ಸ್ವಾಭಾವಿಕ. ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವ ಅಧಿಕಾರ ಯಾರಿಗೂ ಇಲ್ಲ. ಅದರಲ್ಲೂ ವಿಜಯೇಂದ್ರ ಅವರು ಯಾವ ಸಮಯದಲ್ಲಿ ಕನಸು ಕಂಡಿದ್ದಾರೆ ಎನ್ನುವುದನ್ನು ಹೇಳಲಿ ಎಂದು ವಿಜಯೇಂದ್ರ ಹೇಳಿಕೆಗೆ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಲೇವಡಿ ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ದಸರಾ ಮುಗಿಯುವುದರೊಳಗೆ ಸಿಎಂ ಬದಲಾವಣೆ ಆಗುತ್ತಾರೆ ಎನ್ನುವ ಬಿ.ವೈ. ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರಗೆ ಎಲ್ಲೋ ರಾತ್ರಿ ಹೊತ್ತು ಕನಸು ಬಿದ್ದಿರಬೇಕು. ರಾತ್ರಿ ಹೊತ್ತು ಬಿದ್ದ ಕನಸನ್ನು ಬಂದು ವಿಜಯೇಂದ್ರ ಹೇಳಿದ್ದಾನೆ. ಕನಸುಗಳು ನಿಜ ಆಗೋದು ಕಷ್ಟ. ಯಾವತ್ತೂ ಕನಸುಗಳು ನಿಜ ಆಗಲ್ಲ. ಕನಸು ಕನಸಾಗಿಯೇ ಉಳಿಯುವುದು ಸ್ವಾಭಾವಿಕ. ಎಲ್ಲೋ ಒಂದೊಂದು ಮುಂಜಾನೆ ನಾಲ್ಕು, ಐದು ಗಂಟೆಯಲ್ಲಿ ಬೀಳುವ ಕನಸು ನಿಜ ಆಗಬಹುದು. ಅವರಿಗೆ ಎಷ್ಟು ಗಂಟೆಯಲ್ಲಿ ಕನಸು ಬಿದ್ದಿದೆ ನನಗೆ ಗೊತ್ತಿಲ್ಲ. ವಿಜಯೇಂದ್ರ ಅವರು ಮಾತನಾಡುತ್ತಿರುತ್ತಾರೆ. ಅವರು ಆ ರೀತಿ ಮಾತನಾಡಬಾರದು. ಮುಖ್ಯಮಂತ್ರಿಗಳ ರಾಜೀನಾಮೆ ಕೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಗುಡುಗಿದರು.

ದಲಿತರು ಸಿಎಂ ಆಗಬೇಕು: ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡುತ್ತಾ, ದಲಿತರು ಮುಖ್ಯಮಂತ್ರಿ ಆಗಬಾರದು ಎಂಬುದು ನಮ್ಮ ಉದ್ದೇಶ ಅಲ್ಲ. ದಲಿತರು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ಸಮರ್ಥವಾಗಿ ಮೋದಿಯವನ್ನು ಎದುರಿಸಿ ಅಧಿಕಾರ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂಬಾಗಿಲಿನಿಂದ ಆಪಾದನೆ ಮಾಡಿ ಸಿದ್ದರಾಮಯ್ಯ ಅವರನ್ನು ಇಳಿಸಿದ್ರೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಕುತಂತ್ರ, ಷಡ್ಯಂತ್ರ ಇದು. ಸಿದ್ದರಾಮಯ್ಯ ಅವರ ಮೇಲೆ ಇಲ್ಲದ ಸಲ್ಲದ ಆಪಾದನೆ ಹೊರಿಸುತ್ತಿದ್ದಾರೆ ಎಂದರು.

ಒಬ್ಬ ರಾಜ್ಯದ ಮುಖ್ಯಮಂತ್ರಿ ಹದಿನಾಲ್ಕು ಸೈಟ್ ತಗೋಬೇಕಾ! ಮುಖ್ಯಮಂತ್ರಿ ಮನಸ್ಸು ಮಾಡಿ ಚಿಟಕಿ ಹೊಡದರೆ ನೂರು ಸಾವಿರ ಸೈಟ್ ಬರ್ತಾವೆ. ಅವರ ರಾಜಕೀಯ ಜೀವನದಲ್ಲಿ ಒಂದು ದಿವಸ ಕಪ್ಪು ಚುಕ್ಕೆ ತಗೊಂಡಿಲ್ಲ. ಸಿದ್ದರಾಮಯ್ಯ ಅವರು ಏಕೆ ರಾಜೀನಾಮೆ ಕೊಡಬೇಕು? ಜಿ.ಟಿ.ದೇವೇಗೌಡರು ಹೇಳಿಲ್ವಾ ಆರೋಪ ಸಾಬೀತಾಗುವವರೆಗೂ ರಾಜೀನಾಮೆ ಕೊಡಂಗಿಲ್ಲ ಎಂದು. ಹದಿನಾಲ್ಕು ಸೈಟ್‌ಗಳನ್ನು ಕದ್ದು ಹೊಡೆದಿದ್ದಾರೆ. ಸರ್ಕಾರಕ್ಕೆ ನಷ್ಟ ಆಗಿದೆ ಅಂಥ ತೀರ್ಪು ಬರಲಿ ಅವತ್ತು ರಾಜೀನಾಮೆ ಕೊಡ್ತಾರೆ. ಅವತ್ತು ಖಾಲಿ ಆಗುತ್ತೆ, ಅವತ್ತು ನಮ್ ಪಾರ್ಟಿಲಿ ಯಾರನ್ನಾದರೂ ಸಿಎಂ ಮಾಡ್ತಾರೆ. ನಮ್ಮ ಪಾರ್ಟಿ ಐದು ವರ್ಷ ಇರುತ್ತೆ, ಮುಂದೆಯೂ ನಮ್ಮ ಸರ್ಕಾರ ಬರುತ್ತೆ. ಯಾರೂ ಏನು ಮಾಡಲು ಆಗುವುದಿಲ್ಲ. ಅಲ್ಲಲ್ಲೇ ಸಣ್ಣಪುಟ್ಟ ಆಪಾದನೆ ಬರ್ತಾವೆ, ನಿವಾರಣೆ ಮಾಡ್ಕಂಡು ಹೋಗೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈಗಾಗಲೇ ಜಾತಿಗಣತಿ ವರದಿ ಮುಖ್ಯಮಂತ್ರಿಗಳ ಕೈ ಸೇರಿದೆ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಕ್ಯಾಬಿನೆಟ್ ಮುಂದೆ ತಗೊಂಡು ಹೋಗಿ, ಕೂಲಂಕಷವಾಗಿ ಚರ್ಚೆ ಮಾಡಿ ಅದನ್ನು ಏನ್ಮಾಡಬೇಕು ಅಂತ ತೀರ್ಮಾನ ಮಾಡ್ತಿನಿ ಅಂತ ಹೇಳಿದ್ದಾರೆ. ಕ್ಯಾಬಿನೆಟ್‌ನಲ್ಲಿ ಎಲ್ಲರೂ ಇರ್ತಾರೆ ಸಮಗ್ರವಾದ ಚರ್ಚೆ ನಡೆಯುತ್ತದೆ. ಅಲ್ಲಿ ಏನು ಮಾಡಬೇಕು ಅಂತ ನಿರ್ಣಯ ಆಗುತ್ತದೆ, ಅದರ ಮೇಲೆ ಜಾತಿಗಣತಿ ನಿರ್ಣಯ ಆಗಬಹುದು.

ಕ್ಯಾಬಿನೆಟ್ ನಿರ್ಣಯಕ್ಕೆ ಬದ್ಧವಾಗಿದ್ದೇವೆ. ಕ್ಯಾಬಿನೆಟ್ ಏನು ಬೇಕಾದರೂ ಆಗಬಹುದು ಎಂದರು. ಕ್ಯಾಬಿನೆಟ್‌ನಲ್ಲಿ ಇಂತಹದ್ದೇ ತೀರ್ಮಾನ ಆಗುತ್ತೆ ಅಂಥ ಈಗಲೇ ಹೇಳಲು ಆಗುವುದಿಲ್ಲ. ಕ್ಯಾಬಿನೆಟ್ ಮುಂದೆ ನಮ್ಮ ಚರ್ಚೆ ಇದೆ. ಮುಖ್ಯಮಂತ್ರಿಗಳು ಕ್ಯಾಬಿನೆಟ್‌ಗೆ ಇಟ್ಟು ಚರ್ಚೆ ಮಾಡಬೇಕು. ಜಾತಿಗಣತಿ ವಿಚಾರ ಸದನಕ್ಕೂ ಬರಬಹುದು, ಸದನದಲ್ಲೂ ಚರ್ಚೆ ಆಗಬಹುದು. ಸದನದಲ್ಲಿ ಜನಪ್ರತಿನಿಧಿಗಳ ನಿರ್ಧಾರದ ಮೇಲೆ ಹೋಗುತ್ತದೆ. ಜಾತಿಗಣತಿಗೆ ರಾಜಕೀಯ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ. ಜಾತಿಗಣತಿ ವರದಿ ಒಳಗೆ ಏನಿದೆ ಅಂಶ ಹೊರ ಬರಲಿದೆ ಎಂದು ಹೇಳಿದರು.

ಸಿಎಂ ಬದಲಾವಣೆ, ಸತೀಶ್ ಜಾರಕಿಹೋಳಿ ಭೇಟಿ ವಿಚಾರವಾಗಿ ಮಾತನಾಡಿ, ಖರ್ಗೆಯವರನ್ನು ನಾವು ಎಲ್ಲಾ ಹೋಗಿ ನೋಡಿಕೊಂಡು ಬರಬೇಕು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಹರಿಯಾಣ ಚುನಾವಣೆಯಲ್ಲಿ ಭಾಷಣ ಮಾಡಿದ್ದಾರೆ. ಅವರ ಆರೋಗ್ಯ ವಿಚಾರವಾಗಿ ಹೋಗಿ ಮಾತನಾಡಿಸಿದ್ದಾರೆ. ಅದು ಒಬ್ಬ ಮಂತ್ರಿಯ ಕರ್ತವ್ಯ. ಅದಕ್ಕೆ ಊಹಾಪೋಹ ಕಟ್ಟುವ ಅವಶ್ಯಕತೆ ಇಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾರೆ. ಡಿ.ಕೆ.ಸುರೇಶ್ ಅವರೇ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಅಂಥ ಹೇಳಿದ್ದಾರೆ. ನಮ್ಮಲ್ಲಿ ಎಲ್ಲರೂ ಒಮ್ಮತದಿಂದ ಸಿದ್ದರಾಮಯ್ಯ ಐದು ವರ್ಷ ಇರ್ತಾರೆ ಅಂಥ ಹೇಳಿದ್ದಾರೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು. ಮುಡಾದ್ದು ತನಿಖೆ ಆಗಿ ಹೊರಗೆ ಬರಲಿ. ತನಿಖೆ ಆಗಿ ಸತ್ಯಾಂಶ ಬರುವವರೆಗೂ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ನಮ್ಮ ಪಕ್ಷದಲ್ಲಿ ಏನು ಕುತಂತ್ರ ಇರುವುದಿಲ್ಲ ಎಂದು ತಿಳಿಸಿದರು.