ಡಾ. ಬಿ. ಪ್ರಭಾಕರ ಶಿಶಿಲರಿಗೆ ಕೊ. ಅ. ಉಡುಪ ಪ್ರಶಸ್ತಿ 24ರಂದು ಪ್ರದಾನ

| Published : Jul 03 2025, 11:49 PM IST

ಸಾರಾಂಶ

ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ.ಕೊ. ಅ. ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರಿಗೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮೂಲ್ಕಿಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ.ಕೊ. ಅ. ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರಿಗೆ ನೀಡಲಾಗುವುದು.

ಅರ್ಥಶಾಸ್ತ್ರ ಕನ್ನಡೀಕರಣದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರಾಗಿರುವ ಶಿಶಿಲರು ಇದುವರೆಗೆ 165 ಅರ್ಥಶಾಸ್ತ್ರ ಕನ್ನಡ ಕೃತಿ, 10 ಅರ್ಥಶಾಸ್ತ್ರ ಕೃತಿ ಇಂಗ್ಲಿಷ್‌ನಲ್ಲಿ ರಚಿಸಿದ್ದಾರೆ. ಕನ್ನಡ 52 ಸೃಜನಶೀಲ ಕೃತಿ, ತುಳುವಿನಲ್ಲಿ 4 ಕೃತಿ ರಚಿಸಿದ್ದಾರೆ. ಕನ್ನಡದಲ್ಲಿ 10 ಕಾದಂಬರಿ ಮತ್ತು 10 ಸಣ್ಣ ಕಥಾ ಸಂಕಲನ ರಚಿಸಿದ್ದು ಇವರ ಆತ್ಮಕಥನ ‘ಬೊಗಸೆ ತುಂಬಾ ಕನಸು’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ್ದು, ನಾಲ್ಕು ಆವೃತ್ತಿಗಳನ್ನು ಕಂಡಿದೆ. ಯುರೋಪು ಸುತ್ತಿ ಇವರು ರಚಿಸಿದ ದೇಶ ‘ಯಾವುದಾದರೇನು’ ಕೃತಿ 1990 ರ ದಶಕದ ಅತ್ಯುತ್ತಮ ಪ್ರವಾಸ ಕಥನವಾಗಿ ವಿಶ್ವೇಶ್ವರಯ್ಯ ಪ್ರಶಸ್ತಿ ಪಡೆದಿದೆ. ಇವರ ಆಂಗ್ಲ ಅರ್ಥಶಾಸ್ತ್ರ ಕೃತಿಗಳು ಸಾರ್ಕ್ ದೇಶಗಳಲ್ಲಿ ಜನಪ್ರಿಯತೆ ಪಡೆದಿವೆ. ಕನ್ನಡದಲ್ಲಿ ಒಟ್ಟು 231 ಕೃತಿ ರಚನೆ, ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳ ರಚನೆ ಮಾತ್ರವಲ್ಲದೆ ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಇವರು ಸುಳ್ಯ ತಾಲೂಕು 14 ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಪ್ರಶಸ್ತಿಯನ್ನು ಜು.24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಸಮಾರಂಭದಲ್ಲಿ ರು. 10 ಸಾವಿರ ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.