ಅಧಿಕಾರಿಗಳು ಹೊಸ ಪೀಳಿಗೆಗೆ ಆದರ್ಶರಾಗಬೇಕು

| Published : Jul 03 2025, 11:48 PM IST / Updated: Jul 03 2025, 11:49 PM IST

ಸಾರಾಂಶ

ಸರ್ಕಾರಿ ಸೇವೆ ಎಲ್ಲರಿಗೂ ತಲುಪುವಂತೆ ಕರ್ತವ್ಯ ನಿರ್ವಹಿಸಬೇಕು. ನಿಷ್ಠೆ, ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಇದರೊಂದಿಗೆ ಅಧಿಕಾರಿಗಳು ಹೊಸ ಪೀಳಿಗೆಗೆ ಆದರ್ಶರಾಗಬೇಕು ಎಂದು ಹುಕ್ಕೇರಿ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸರ್ಕಾರಿ ಸೇವೆ ಎಲ್ಲರಿಗೂ ತಲುಪುವಂತೆ ಕರ್ತವ್ಯ ನಿರ್ವಹಿಸಬೇಕು. ನಿಷ್ಠೆ, ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಇದರೊಂದಿಗೆ ಅಧಿಕಾರಿಗಳು ಹೊಸ ಪೀಳಿಗೆಗೆ ಆದರ್ಶರಾಗಬೇಕು ಎಂದು ಹುಕ್ಕೇರಿ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ ಅವರು ಸೇವಾನಿವೃತ್ತಿ ಹೊಂದಿದ ಪ್ರಯುಕ್ತ ಆಯೋಜಿಸಿದ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಸಂಯಮ, ಸಹನೆಯಿಂದ ಆಲಿಸಿ ಪರಿಹರಿಸುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸಂಪರ್ಕದ ಸೇತುವೆಯಂತೆ ಕರ್ತವ್ಯ ನಿಭಾಯಿಸಬೇಕು. ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ. ಇದೀಗ ನಿವೃತ್ತಿ ಹೊಂದಿದ ಮಾಹುತ ಅವರು ಸೇವಾ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ನೌಕರರ ಪಾಲಿನ ಒಡನಾಡಿ ಮತ್ತು ಆಪ್ತಮಿತ್ರನಂತೆ ವರ್ತಿಸುತ್ತಿದ್ದರು. ಶಿಸ್ತು, ಯೋಜನಾಬದ್ಧ ಆಡಳಿತದಿಂದ ಮಾಹುತ ವೃತ್ತಿ ನೈಪುಣ್ಯತೆ ಹೊಂದಿ ಮಾದರಿ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಸರಳ, ಸಜ್ಜನ, ಸೌಮ್ಯ ಸ್ವಭಾವದ ಅವರ ಗುಣಲಕ್ಷಣಗಳು ಮೆಚ್ಚುವಂಥದ್ದಾಗಿದೆ ಎಂದರು.ನಿವೃತ್ತಿ ಅಧಿಕಾರಿ ಎಚ್.ಎ.ಮಾಹುತ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ಬಡ್ತಿ, ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ. ಹಾಗೆಯೇ ನಿವೃತ್ತಿ ಕೂಡ ಹೊಂದಲೇಬೇಕು. ಹುಕ್ಕೇರಿ ಜನ ಹೃದಯವಂತರಿದ್ದು ಇಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ನನ್ನ ಪೂರ್ವಜನ್ಮದ ಪುಣ್ಯ ಮತ್ತು ಸೌಭಾಗ್ಯ ಎನಿಸುತ್ತದೆ. ಇದು ನನಗೆ ಆತ್ಮತೃಪ್ತಿ ತಂದಿದೆ ಎಂದ ಅವರು, ಹುಕ್ಕೇರಿ ತಾಲೂಕಿನ ಜನರು ಸಾಕಷ್ಟು ಸಹಕಾರ ನೀಡಿರುವುದಾಗಿ ನೆನೆದು ಕೆಲಕಾಲ ಭಾವುಕರಾದರು.ಸಿಡಿಪಿಒ ಹರಿಪ್ರಸಾದ, ಪತ್ರಾಂಕಿತ ಕಚೇರಿ ಅಧೀಕ್ಷಕ ಎಂ.ಬಿ.ಹೊಸಮನಿ, ವಿನಾಯಕ ಕಲ್ಲೇಕನವರ, ಪ್ರವೀಣ ಮೇತ್ರಿ, ಎಂ.ಜಿ.ಉಣ್ಣಿ, ವಸತಿ ನಿಲಯ ಪಾಲಕರಾದ ಎಲ್.ಬಿ.ಮಾಲದಾರ, ಎಸ್.ಎಂ.ಶೆಟ್ಟನ್ನವರ, ನಾಗವೀಣಾ ಹೊಳೆಯಾಚೆ, ಮಹಾನಂದಾ ಕೊಟಬಾಗಿ, ರಾಜಶ್ರೀ ಪಾಟೀಲ, ಶಬಾನಾ ಗುಂದಗಿ, ಎಂ.ಬಿ.ಕಾಂಬಳೆ, ಎಸ್.ವಿ.ಪೂಜೇರಿ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ಕರೆಪ್ಪ ಗುಡೆನ್ನವರ, ರಮೇಶ ಹುಂಜಿ, ಕೆಂಪಣ್ಣಾ ಶಿರಹಟ್ಟಿ, ಕೆ.ವೆಂಕಟೇಶ, ಕಿರಣ ಬಾಗೇವಾಡಿ, ಸತೀಶ ದಿನ್ನಿಮನಿ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಎಂ.ಶೆಟ್ಟನ್ನವರ ನಿರೂಪಿಸಿ ವಂದಿಸಿದರು. ಇದೇ ವೇಳೆ ಮಾಹುತ ದಂಪತಿಯನ್ನು ಇಲಾಖೆ ಅಧಿಕಾರಿಗಳು, ವೃಂದ ನೌಕರರು ಮತ್ತು ಜನರು ಸನ್ಮಾನಿಸಿ ಗೌರವಿಸಿದರು.