ಉಡುಪಿ: ವೃತ್ತಿ ಮೇಳದ ಯುವ ಕಲಾವಿದರಿಗೆ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ನಾಲ್ಕು ದಿನಗಳ ಮಾರ್ಗದರ್ಶಿ ಶಿಬಿರದ ಸಮಾರೋಪ ಮತ್ತು ಯಕ್ಷ ವಿದ್ವಾಂಸರಿಗೆ ನೀಡುತ್ತಾ ಬಂದ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸಮಾರಂಭವು ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಜರುಗಿತು.

ಉಡುಪಿಯಲ್ಲಿ ಜರುಗಿದ ಸಮಾರಂಭದಲ್ಲಿ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತೃ ಡಾ. ಜಿ. ಭೀಮೇಶ್ವರ ಜೋಶಿ ಅವರು ದಾಮ್ಲೆ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ 60 ಸಾವಿರ ರು. ನಗದನ್ನು ಒಳಗೊಂಡಿದೆ.

ಅಭಿನಂದನಾ ನುಡಿಯೊಂದಿಗೆ ಶುಭ ಹಾರೈಸಿದ ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಅವರು ತಮ್ಮ ನಿಡುಗಾಲದ ಸ್ನೇಹಿತ ಡಾ. ಚಂದ್ರಶೇಖರ ದಾಮ್ಲೆ ಅವರ ಸಾಧನೆಗಳನ್ನು ಪರಿಚಯಿಸಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಯಕ್ಷಗಾನದ ವಾಚಿಕ ಅತ್ಯಂತ ಸಮೃದ್ಧವಾದುದು. ಶುದ್ಧ ಉಚ್ಚಾರ, ಸ್ಪಷ್ಟ ಮಾತುಗಾರಿಕೆಯಿಂದ ನೀವೆಲ್ಲ ಈ ಕ್ಷೇತ್ರದ ಶ್ರೇಷ್ಠ ಕಲಾವಿದರಾಗಿ ಎಂದು ಶುಭ ಕೋರಿದರು.ಪ್ರಶಸ್ತಿ ಸ್ವೀಕರಿಸಿದ ಡಾ. ದಾಮ್ಲೆಯವರು ಯಕ್ಷಗಾನದ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಯಕ್ಷಗಾನ ಕಲಾರಂಗ ಸಂಸ್ಥೆಯಿಂದ ಈ ಪ್ರಶಸ್ತಿ ಸ್ವೀಕರಿಸಿರುವುದು ಧನ್ಯತೆ ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ನಮ್ಮ ಹಿರಿಯರ ನೆನಪಿನಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರಂತಹ ಸಾಧಕ ವಿದ್ವಾಂಸರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಸಂತೋಷ ತಂದಿದೆ. ತಾನು ಹಿಂದೆ ಈ ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವುದು ಅಭಿಮಾನದ ವಿಷಯವಾಗಿದೆ ಎಂದರು.

ಜಯಲಕ್ಮೀ ಸಿ. ದಾಮ್ಲೆ ಮತ್ತು ಅಕ್ಷರ ದಾಮ್ಲೆ ಅವರನ್ನು ಗೌರವಿಸಲಾಯಿತು. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ವಿಶ್ವಸ್ಥರಾದ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಸುನಿಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶಿಬಿರದ ನಿರ್ದೇಶಕ ಪವನ್ ಕಿರಣ್ ಕೆರೆ ಉಪಸ್ಥಿತರಿದ್ದರು. ನಾಲ್ಕೂ ದಿನ ಶಿಬಿರಾರ್ಥಿಗಳೊಂದಿಗಿದ್ದು ಮಾರ್ಗದರ್ಶನ ನೀಡಿದ ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಅನಂತ ಪದ್ಮನಾಭ ಪಾಠಕರನ್ನು ಗೌರವಿಸಲಾಯಿತು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಉಪಯುಕ್ತ ಪುಸ್ತಕಗಳೊಂದಿಗೆ ಗೌರವ ಸಂಭಾವನೆ ವಿತರಿಸಲಾಯಿತು. ಕಲಾರಂಗದ ಅಧ್ಯಕ್ಷರೂ, ಶಿಬಿರದ ಪ್ರಾಯೋಜಕರೂ ಆದ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ವಿದ್ಯಾಪ್ರಸಾದ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.