ಮೂಡುಬಿದಿರೆ: ತಮ್ಮ ಸಭೆ ಸಮಾರಂಭಗಳು ಅದ್ದೂರಿಯಾಗಿರಬೇಕು ಎಂದು ಪೈಪೋಟಿಗೆ ಬಿದ್ದವರಂತೆ ಧಾಂದೂಂ ಎಂದು ಖರ್ಚು ಮಾಡುವ ಆಡಂಬರದ ಮದುವೆ, ಹುಟ್ಟು ಹಬ್ಬ, ವಾರ್ಷಿಕೋತ್ಸವಗಳಿಗೆ ಕೊರತೆಯಿಲ್ಲ. ಆದರೆ ಖರ್ಚು ಮಾಡುವುದರಲ್ಲೂ ಸಾರ್ಥಕತೆ ಇರಬೇಕು ಎಂದು ಮಾದರಿಯೊಂದನ್ನು ತೋರಿಸಿಕೊಡುವಲ್ಲಿ ತುಳುನಾಡ ಸೇನಾ ಸ್ಥಾಪಕ, ಮುಂಬೈ ಉದ್ಯಮಿ ಮೂಲತಃ ಮಿಜಾರಿನ ಹರಿ ಮೀನಾಕ್ಷಿ ದೋಟ ನಿವಾಸಿ ಸುರೇಶ್ ಶೆಟ್ಟಿ ಗಮನ ಸೆಳೆದಿದ್ದಾರೆ.

ಯುವ ನಾಯಕನಾಗಿ ತನ್ನ ಮುದ್ದಿನ ಮಗಳು ಝಾನ್ಸಿಯ ಹುಟ್ಟುಹಬ್ಬ ದಿನದಂದು ತನ್ನೂರಿನ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 15 ಲಕ್ಷ ರು. ನೆರವು ನೀಡಿ ಮಾದರಿಯಾಗಿದ್ದಾರೆ. ಸುರೇಶ್ ಶೆಟ್ಟಿ ಅವರಿಗೆ ತನ್ನೂರಿನ ಮೇಲೆ ಅಭಿಮಾನವಿದೆ, ಬಾಲ್ಯ ಜೀವನ ನೆನಪಿದೆ, ಬಡತನ ಗೊತ್ತಿದೆ. ಇದೆಲ್ಲವನ್ನೂ ಅರಿತ ಅವರು ತನ್ನ ಸಂಪಾದನೆಯ ಒಂದಿಷ್ಟು ತನ್ನೂರಿನ ಬಡ ವಿದ್ಯಾರ್ಥಿಗಳಿಗಿರಲಿ ಎನ್ನುವ ಸೇವಾ ಮನೋಭಾವದಿಂದ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಮಗಳು ಹುಟ್ಟಿದ ದಿನದಂದು ಸ್ಥಳೀಯ ಶಾಸಕರ ಸಹಿತ ತನ್ನಿಷ್ಟದ ಅತಿಥಿಗಳನ್ನು ಕರೆದು, ತನ್ನ ಪ್ರಿಯ ತಂದೆ ಹರಿಯಪ್ಪ ಶೆಟ್ಟಿ, ತಾಯಿ ಮೀನಾಕ್ಷಿ ಅವರ ಸಮ್ಮುಖದಲ್ಲಿ ಮಿಜಾರು-ತೋಡಾರು ಗ್ರಾಮಗಳ ಆರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 1360 ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ. ವೆಚ್ಚದ ಪುಸ್ತಕಗಳನ್ನು ಅದರ ಜೊತೆಗೆ ಬ್ಯಾಗ್, ಕೊಡೆಗಳನ್ನು ವಿತರಿಸಿದ್ದಾರೆ‌. 200 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರದಂತೆ ಹತ್ತು ಲಕ್ಷ ರು.ಗಳ ಪ್ರೋತ್ಸಾಹಧನವನ್ನೂ ವಿತರಿಸಿ ಗಮನ ಸೆಳೆದಿದ್ದಾರೆ.ಇದರ ಜೊತೆಗೆ ಮೂಡುಬಿದಿರೆ ಪ್ರೆಸ್ ಕ್ಲಬ್ ನ ನೂತನ ಕಟ್ಟಡಕ್ಕೆ ಒಂದು ಲಕ್ಷ ರು. ಆರ್ಥಿಕ ಸಹಾಯ ನೀಡಿದ್ದಾರೆ.

ಸುರೇಶ್ ಶೆಟ್ಟಿ ಮುಂಬೈಯಲ್ಲಿ ಜನಿಸಿದರೂ ಉದ್ಯಮಿಯಾಗಿದ್ದರೂ ತನ್ನ ಹುಟ್ಟೂರ ಜನರಿಗೆ ಏನಾದರೊಂದು ಸಹಾಯ ಮಾಡಬೇಕೆನ್ನುವ ತುಡಿತ ಉಳ್ಳವರು. ತುಳುನಾಡ ಸೇನಾ ಎನ್ನುವ ಸಂಘಟನೆ ಕಟ್ಟಿಕೊಂಡು ಈ ಹಿಂದೆ ಮೂಡುಬಿದಿರೆಯಲ್ಲಿ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಮಾಡಿ, ಬಳಿಕ ಮೂಡುಬಿದಿರೆಯಲ್ಲಿ ಕಂಬಳ ಮಾಡಿ ಪ್ರೋತ್ಸಾಹಿಸಿ ಗಮನ ಸೆಳೆದವರು. ಅದೆಷ್ಟೋ ಅಸಹಾಯಕರಿಗೆ ನೆರವಾಗಿದ್ದಾರೆ. ಇದೀಗ 15 ಲಕ್ಷ ರು.ವನ್ನು ತನ್ನ ಹುಟ್ಟೂರ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಭಿನ್ನರಾಗಿ ಕಂಡಿದ್ದಾರೆ.

ಅವರು ತನ್ನ ಹೆಸರಿನ ಜೊತೆಗೆ ತನ್ನ ಹೆತ್ತವರ ಹೆಸರು ‘ಹರಿಮೀನಾಕ್ಷಿ’ ಎನ್ನುವುದನ್ನು ಹೈಲೆಟ್ ಮಾಡಿಕೊಂಡಿರುವುದು. ಈ ಮೂಲಕ ತನ್ನ ಯಶಸ್ಸಿನ ಹಿಂದೆ ಹೆತ್ತವರ ಆಶೀರ್ವಾದ ಇದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಅವರ ಸೇವಾ ಕಾರ್ಯಗಳು ಇನ್ನಷ್ಟು ಮುಂದುವರಿಯಲಿ, ಅದು ಅಶಕ್ತರಿಗೆ,ಅಸಹಾಯಕರಿಗೆ, ಕಷ್ಟದಲ್ಲಿರುವವರಿಗೆ ಸಹಾಯವಾಗಲಿ ಎಂಬ ಆಶಯ ನಮ್ಮದು.


-ಅಶ್ರಫ್ ವಾಲ್ಪಾಡಿ