ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ 24X7 ನೀರು ಪೂರೈಕೆಯ ಜಲಸಿರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. 2027ರ ಆಗಸ್ಟ್‌ ವೇಳೆಗೆ ಮನೆಗಳಿಗೆ ನೀರಿನ ಪೈಪ್‌ಲೈನ್‌ ಸಂಪರ್ಕ ಪೂರ್ಣಗೊಳಿಸುವುದಾಗಿ ಗುತ್ತಿಗೆ ವಹಿಸಿಕೊಂಡ ಮೆಸರ್ಸ್‌ ಸುಯೆಜ್‌ ಪ್ರಾಜೆಕ್ಟ್ಸ್‌ ಪ್ರೈ. ಲಿ. ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳೂರಿನ ವಿವಿಧ ಕಡೆ ನಡೆಯುತ್ತಿರುವ ಕಾಮಗಾರಿ ಹಾಗೂ ಕೋಡಿಕಲ್‌ನಲ್ಲಿ ವಿನೂತನ ಶೈಲಿಯಲ್ಲಿ ನಿರ್ಮಿಲಾಗಿರುವ ಡಬಲ್‌ ಸ್ಟೋರೇಜ್‌ ಟ್ಯಾಂಕ್‌ (40 ಲಕ್ಷ ಲೀಟರ್‌ ಸಂಗ್ರಹ ಸಾಮರ್ಥ್ಯ)ನ ಪ್ರದೇಶಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಶುಕ್ರವಾರ ಕರೆದೊಯ್ದು ಅವರು ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

24x7 ಮಂಗಳೂರು ನೀರು ಸರಬರಾಜು ಯೋಜನೆಯ ಶೇ.76 ಕಾಮಗಾರಿ ಪೂರ್ಣಗೊಂಡಿದೆ. 2027ರ ಮಾರ್ಚ್‌ವರೆಗೆ ಜಲಸಿರಿ ಯೋಜನೆಯ ಕಾಮಗಾರಿ ಪೈಪ್‌ಲೈನ್‌ ಅಳವಡಿಕೆ, ಟ್ಯಾಂಕ್‌ಗಳ ನಿರ್ಮಾಣ ಹಾಗೂ ಅಡ್ಯಾರ್‌ನಲ್ಲಿ ನಡೆಯುತ್ತಿರುವ ನೀರು ಶುದ್ಧೀಕರಣ ಘಟಕ (ಡಬ್ಯುಟಿಪಿ)ವನ್ನು ಅಂತಿಮಗೊಳಿಸಲು ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಜಲಸಿರಿ ಯೋಜನೆಯ ಕಾರ್ಯ ನಿರ್ವಾಹಕ ಇಂಜಿನಿಯರ್‌ ಸುರೇಶ್‌ ಎ.ಎಚ್‌. ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ 24x7 ನೀರು ಸರಬರಾಜು ಯೋಜನೆಯಡಿ 1,288.8 ಕಿ.ಮೀ. ನೀರು ಪೂರೈಕೆ ಜಾಲ, 19 ಓವರ್‌ ಹೆಡ್‌ಟ್ಯಾಂಕ್‌ಗಳ ನಿರ್ಮಾಣ, 6 ಜಿಎಲ್‌ಎಸ್‌ಆರ್‌ ಹಾಗೂ 7 ಪಂಪಿಂಗ್‌ ಹೌಸ್‌ಗಳ ನಿರ್ಮಾಣದ ಜತೆಗೆ ಮಲ್ಟಿಜೆಟ್‌ ವಾಟರ್‌ ಮೀಟರ್‌ನೊಂದಿಗೆ 96,300 ಗೃಹ ಬಳಕೆಯ ಸಂಪರ್ಕ ಒದಗಿಸುವುದು, 81.7 ಎಂಎಲ್‌ಡಿ ಫಿಲ್ಟರ್‌, ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿ ಜಲಸಿರಿ ಯೋಜನೆಯಡಿ ಒಳಗೊಂಡಿದೆ. ಯೋಜನೆ ಪೂರ್ಣಗೊಂಡ ಬಳಿಕ ನೀರು ಪೂರೈಕೆ ಹಾಗೂ ನಿರ್ವಹಣಾ ಕಾರ್ಯವನ್ನು 8 ವರ್ಷಗಳ ಅವಧಿಗೆ ಸೂಯೆಜ್‌ ಕಂಪನಿ ನಿರ್ವಹಿಸಲಿದೆ ಎಂದರು.

ಅಡ್ಯಾರಲ್ಲಿ ನೀರು ಶುದ್ಧೀಕರಣ ಘಟಕ:

ಅಡ್ಯಾರ್‌ನಲ್ಲಿ 125 ಎಂಎಲ್‌ಡಿ ಸಂಗ್ರಹ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ 127.7 ಕೋಟಿ ರು. ವೆಚ್ಚದಲ್ಲಿ 2024ರ ಜನವರಿಯಲ್ಲಿ ಈ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರಕಿದ್ದು ಒಟ್ಟು 617.22 ಕೋಟಿ ರು. ವೆಚ್ಚದಲ್ಲಿ ಮನಪಾ ವ್ಯಾಪ್ತಿಯಲ್ಲಿ 24x7 ನೀರು ಪೂರೈಕೆಯ ಜಲಸಿರಿ ಯೋಜನೆ ಪ್ರಗತಿಯಲ್ಲಿದೆ ಎಂದರು.


ಈವರೆಗೆ 877.79 ಕಿ.ಮೀ. ಎಚ್‌ಡಿಪಿಇ ಮತ್ತು ಡಿಐ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ನಡೆದಿದ್ದು, 19 ಓವರ್‌ಹೆಡ್‌ ಟ್ಯಾಂಕ್‌ಗಳಲ್ಲಿ 3 ಟ್ಯಾಂಕ್‌ಗಳು ಕಾರ್ಯಾರಂಭಿ ನೀರು ಪೂರೈಕೆ ಮಾಡುತ್ತಿದ್ದರೆ, 7 ಟ್ಯಾಂಕ್‌ಗಳು ಕಾರ್ಯಾರಂಭಿಸಿವೆ. ಉಳಿದ 7 ಟ್ಯಾಂಕ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ಟ್ಯಾಂಕ್‌ಗೆ ಇನ್ನೂ ಭೂಮಿ ಲಭ್ಯವಾಗದ ಕಾರಣ ಬಾಕಿಯಾಗಿದೆ. ಒಂದು ಭೂಮಟ್ಟದ ಜಲ ಸಂಗ್ರಹಾಗಾರ ಆರಂಭವಾಗಿದ್ದರೆ, 4ರ ಸಿವಿಲ್‌ ಕಾಮಗಾರಿ ಪೂರ್ಣಗೊಂಡು ಎಲೆಕ್ಟ್ರೋ ಮೆಕ್ಯಾನಿಕಲ್‌ ಕಾಮಗಾರಿ ಪ್ರಗತಿಯಲ್ಲಿದೆ. 7 ಇಂಟರ್‌ಮಿಟನ್‌ ಪಂಪಿಂಗ್‌ ಸ್ಟೇಶನ್‌ಗಳ ಕಾಮಗಾರಿ ಪೂರ್ಣಗೊಂಡೆದೆ. ಈ ಯೋಜನೆಯಡಿ ಈಗಾಗಲೇ ಹಾಲಿ ಇರುವ ಮನೆ ಸಂಪರ್ಕಗಳಲ್ಲಿ 38,200 ಮನೆಗಳಿಗೆ ಜಲಸಿರಿಯಡಿ ನೀರು ಪೂರೈಕೆಯ ಸಂಪರ್ಕ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಸೂಯೆಜ್‌ ಕಂಪನಿಯ ಉನ್ನಿಕೃಷ್ಣ, ಆಡಳಿತ ವಿಭಾಗದ ರಾಕೇಶ್‌ ಶೆಟ್ಟಿ, ವ್ಯವಸ್ಥಾಪಕ ಉದಯ್‌ ಕುಮಾರ್‌, ಹೈಡ್ರಾಲಿಕ್‌ ಡಿಸೈನ್‌ ಎಂಜಿನಿಯರ್‌ ಅಮಿತ್‌ ಕುಮಾರ್‌ ಇದ್ದರು.

2029ರಲ್ಲಿ ಆರಂಭವಾದ ಯೋಜನೆ...

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಮೂಲಕ ಮಂಗಳೂರು ನಗರಕ್ಕೆ 24x7 ನೀರು ಸರಬರಾಜು ಯೋಜನೆಯನ್ನು ಒಟ್ಟು 587.67 ಕೋಟಿ ರು. ವೆಚ್ಚದಲ್ಲಿ 2019ರ ಡಿ. 24ರಂದು ಆರಂಭಗೊಂಡಿತ್ತು. 2023ಕ್ಕೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಗುತ್ತಿಗೆ ವಹಿಸಿರುವ ಸುಯೆಜ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ 1 ವರ್ಷ ಹೆಚ್ಚುವರಿ ಅವಧಿ ನೀಡಿ 2024ರ ಮೇ ತಿಂಗಳಿಗೆ ಅಂತ್ಯಗೊಳಿಸಲು ನಿರ್ದೇಶಿಸಲಾಗಿತ್ತು. ಅಕಾಲಿಕ ಮಳೆ, ಭೂವಾಜ್ಯ, ಹೆದ್ದಾರಿ ಸಮಸ್ಯೆಯ ಕಾರಣಗಳಿಂದಾಗಿ ಕುಂಟುತ್ತಾ ಸಾಗಿರುವ ಜಲಸಿರಿ ಯೋಜನೆಯನ್ನು ಪೂರ್ಣಗೊಳಿಸಲು ಇದೀಗ 2027ರ ಮಾರ್ಚ್‌ ಅಂತ್ಯದವರೆಗೆ ಮತ್ತೆ ಕಾಲಾವಕಾಶ ನೀಡಲಾಗಿದೆ.