ಉಳ್ಳಾಲ: ಕೃಷಿಕರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದ ಮೇಳಗಳು ನಿರಂತರವಾಗಿ ನಡೆಯಬೇಕು ಎಂದು ನಟ ಹಾಗೂ ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ಹೇಳಿದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನೇತೃತ್ವದಲ್ಲಿ ಸಿರಿ ತೋಟಗಾರಿಕೆ ಸಂಘ ಮಂಗಳೂರು ಮತ್ತು ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಕೋಟೆಕಾರು ಬೀರಿಯ ಕೆವಿಎಸ್‌ಎಸ್ ಕನ್ವೆನ್ಶನ್ ಹಾಲ್‌ನಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಹಲಸು-ಮಾವು ಮೇಳಕ್ಕೆ ಹಲಸಿನ ಕಾಯಿ ತುಂಡರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿಕ ಕುಟುಂಬದಲ್ಲಿ ಬೆಳೆದಿರುವ ತಮಗೆ ಹಲಸು ಮತ್ತು ಮಾವಿನ ಹಣ್ಣುಗಳೊಂದಿಗೆ ವಿಶೇಷ ನಂಟಿದೆ. ಹಲಸಿನಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ಇಂತಹ ಮೇಳಗಳು ರೈತರಿಗೆ ಆರ್ಥಿಕವಾಗಿ ನೆರವಾಗುವ ಜತೆಗೆ ಕೃಷಿ ಉತ್ಪನ್ನಗಳ ಮಹತ್ವವನ್ನು ಜನರಿಗೆ ಪರಿಚಯಿಸುತ್ತವೆ ಎಂದರು.ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಡಾ. ಭಾರತಿ ನಿರ್ಮಲ್ ಮಾತನಾಡಿ, ಮನೆಯಂಗಳದಲ್ಲಿ ಬೆಳೆಯುವ ಹಣ್ಣು-ತರಕಾರಿಗಳು ನೇರವಾಗಿ ಜನರಿಗೆ ತಲುಪುವ ಮೂಲಕ ಆರೋಗ್ಯಕರ ಜೀವನಶೈಲಿ ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ರೈತರಿಗೆ ಬ್ಯಾಂಕ್ ವತಿಯಿಂದ ವಿವಿಧ ಸಬ್ಸಿಡಿ ಹಾಗೂ ಪ್ರೋತ್ಸಾಹಧನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯ ಮೇಳಕ್ಕೂ ಸಾರ್ವಜನಿಕರು ಉತ್ತಮ ಬೆಂಬಲ ನೀಡುವ ವಿಶ್ವಾಸವಿದೆ ಎಂದರು.ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಮಾತನಾಡಿ, ಮೇಳದಲ್ಲಿ ವಿವಿಧ ತಳಿಯ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಪ್ರದರ್ಶಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಪರೂಪದ ತಳಿಗಳೊಂದಿಗೆ ಕೃಷ್ಣ ಶೆಟ್ಟಿ ಅವರ ತೋಟದಲ್ಲಿ ಬೆಳೆದ ಪ್ರಸಿದ್ಧ ‘ಮಿಯಾಜಾಕಿ’ ಮಾವು ಕೂಡ ಆಕರ್ಷಣೆಯ ಕೇಂದ್ರಬಿಂದುವಾಗಿದೆ ಎಂದರು.

ರಾಘವ ಆರ್. ಉಚ್ಚಿಲ್, ರಾಘವ ಸಿ. ಉಚ್ಚಿಲ್, ಸುರೇಖಾ ಚಂದ್ರಹಾಸ್, ಉದಯ ಕುಮಾರ್ ಶೆಟ್ಟಿ ಕೊಂಡಾಣ, ಗಂಗಾಧರ್ ಉಳ್ಳಾಲ್, ಬಾಬು ನಾಯ್ಕ್, ಸುನಿತಾ ಲೋಬೋ, ಕೆ.ಬಿ. ಅಬುಸಾಲಿ, ಹರ್ಷವರ್ಧನ್ ಉಳ್ಳಾಲ್, ಲತೀಶ್ ಮರೋಳಿ, ಉದಯ ಕುಮಾರ್ ಶೆಟ್ಟಿ ಕೊಂಡಾಣ, ನವೀನ್ ಕುಮಾರ್ ಇದ್ದರು.