ಸಾರಾಂಶ
ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹಾಗೂ ಮಂಡ್ಯ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಯವರ ಗೆಲುವಿಗಾಗಿ ಅವರ ಅಭಿಮಾನಿಗಳು ಉರುಳು ಸೇವೆ ಮಾಡಿ ಗಮನ ಸೆಳೆದರು. ಪಟ್ಟಣದ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಸುತ್ತ ಒಂದು ಕಿಲೋ ಮೀಟರ್ ಉರುಳು ಸೇವೆ ಮಾಡಿದ ಜೆಡಿಎಸ್ ಯುವ ಮುಖಂಡರಾದ ಮಂಜುನಾಥ್ ಹಾಗೂ ಚಂದ್ರು ನಾಯಕರು ಗೆಲುವಿಗಾಗಿ ಹರಕೆ ತೀರಿಸಿದರು.
ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ನೂರಕ್ಕೆ ನೂರರಷ್ಟು ಡಾ.ಮಂಜುನಾಥ್ ಅವರು ಗೆಲುವು ಸಾಧಿಸಲಿದ್ದಾರೆ ಅವರ ಗೆಲುವಿಗಾಗಿ ಅಭಿಮಾನಿಗಳು ಉರುಳು ಸೇವೆ ಮಾಡುತ್ತಿರುವುದು ಅವರ ಸೇವೆಗೆ ಹಿಡಿದ ಕನ್ನಡಿಯಾಗಿದ್ದು, ದೇವರು ಕೂಡ ಈ ಬಾರಿ ಡಾ.ಮಂಜುನಾಥ್ ಪರ ನಿಲ್ಲುತ್ತಾರೆಂಬ ನಂಬಿಕೆ ಇದೆ. ಹಣವಂತರಾ ಹೃದಯವಂತರು ಗೆಲುವು ಸಾಧಿಸುತ್ತಾರಾ ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ. ಮಾಗಡಿಯಲ್ಲಿ 25 ಸಾವಿರಕ್ಕೂ ಹೆಚ್ಚು ಲೀಡ್ ಬಿಜೆಪಿ ಪಕ್ಷಕ್ಕೆ ಬರಲಿದ್ದು, ಅತಿ ಹೆಚ್ಚು ಲೀಡ್ ಮೂಲಕ ಮಂಜುನಾಥ್ ಆಯ್ಕೆಯಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಮೂರು ಬಾರಿ ಡಿ.ಕೆ.ಸುರೇಶ್ ಅವರನ್ನು ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದರು. ಆದರೆ, ಈ ಬಾರಿ ಬದಲಾವಣೆ ಬಯಸಿದ್ದು ಡಾ.ಮಂಜುನಾಥರನ್ನು ಸಂಸದರಾಗಿ ಆಯ್ಕೆ ಮಾಡಲಿದ್ದಾರೆ. ಮಂಜುನಾಥ್ ಆಯ್ಕೆಯಾದರೆ ದೇಶದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರುವ ಕೆಲಸ ಮಾಡಲಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಗಳಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲಿದ್ದಾರೆ. ಇದೇ ರೀತಿ ನನ್ನ ಗೆಲುವಿಗಾಗಿಯೂ ಕೂಡ ಇಬ್ಬರು ಯುವಕರು ಉರುಳು ಸೇವೆ ಮಾಡಿದ್ದರು. ರಂಗನಾಥಸ್ವಾಮಿಯ ಆಶೀರ್ವಾದ ನಮ್ಮ ಅಭ್ಯರ್ಥಿ ಮೇಲೆ ಇರುತ್ತದೆ ಎಂದು ತಿಳಿಸಿದರು.
ರಂಗನಾಥ ಸ್ವಾಮಿ ದೇವಸ್ಥಾನದ ಸುತ್ತಲೂ ಒಂದು ಕಿಲೋ ಮೀಟರ್ ಉರುಳು ಸೇವೆ ಮಾಡಿ ಅಭ್ಯರ್ಥಿ ಪರ ಜೈಕಾರ ಹಾಕಲಾಯಿತು. ಇದೇ ವೇಳೆ ಮುಖಂಡರಾದ ಕೆ.ವಿ.ಬಾಲು, ಅನಿಲ್, ವಿಜಯ್ ಕುಮಾರ್, ಚಿಕ್ಕಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಭಾಸ್ಕರ್, ಕಿರಣ್ ಕುಮಾರ್, ನಾರಾಯಣಪ್ಪ, ಕರಡಿ ನಾಗರಾಜು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ಪೋಟೋ 13ಮಾಗಡಿ1:ಮಾಗಡಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಡಾ.ಸಿ.ಎನ್.ಮಂಜುನಾಥ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಗೆಲುವಿಗಾಗಿ ಅಭಿಮಾನಿಗಳು ಉರುಳು ಸೇವೆ ಮಾಡಿದರು.