ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಡಾ.ಮೊಗಳ್ಳಿ ಗಣೇಶ್: ವಾಸು

| Published : Oct 07 2025, 01:02 AM IST

ಸಾರಾಂಶ

ಡಾ.ಮೊಗಳ್ಳಿ ಗಣೇಶ್ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲೂಕಿಲ್ಲಿ. ಆದರೆ, ಹೆಚ್ಚಿನ ಒಡನಾಟ ಹೊಂದಿದ್ದು ಮಾತ್ರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯಲ್ಲಿ. ಅವರ ಅಕ್ಕ ಗೌರಮ್ಮ ಇದೇ ಊರಿನವರು. ಅವರಿಗೆ ಮಂಡ್ಯ ಜಿಲ್ಲೆಯ ಜನರ ಜೊತೆ ಅವಿನಾಭಾವ ಸಂಬಂಧವಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದವರು ಕಥೆಗಾರ ಡಾ.ಮೊಗಳ್ಳಿ ಗಣೇಶ್ ಎಂದು ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಪರಿಷತ್ತು ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಪ್ರಸಿದ್ಧ ಕಥೆಗಾರ ಡಾ.ಮೊಗಳ್ಳಿ ಗಣೇಶ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಡಾ.ಮೊಗಳ್ಳಿ ಗಣೇಶ್ ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲೂಕಿಲ್ಲಿ. ಆದರೆ, ಹೆಚ್ಚಿನ ಒಡನಾಟ ಹೊಂದಿದ್ದು ಮಾತ್ರ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯಲ್ಲಿ. ಅವರ ಅಕ್ಕ ಗೌರಮ್ಮ ಇದೇ ಊರಿನವರು. ಅವರಿಗೆ ಮಂಡ್ಯ ಜಿಲ್ಲೆಯ ಜನರ ಜೊತೆ ಅವಿನಾಭಾವ ಸಂಬಂಧವಿತ್ತು. ಅವರ ಇಚ್ಚೆಯಂತೆಯೇ ಮಾದನಾಯಕನಹಳ್ಳಿಯಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ ಎಂದರು.

ಕಥೆ, ಕಾವ್ಯ, ಕಾದಂಬರಿ, ವಿಮರ್ಶೆ, ವಿಚಾರ ಮತ್ತು ಅನುವಾದ ಕ್ಷೇತ್ರದಲ್ಲಿ ಹೊಸತನ ತಂದಿದ್ದ ಮೊಗಳ್ಳಿ ಅವರು ಸುಮಾರು 60ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾಹಿತ್ಯ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದರು.

ಹಂಪೆ ಕನ್ನಡ ವಿವಿ ಸಂಶೋಧನಾ ಸಹಾಯಕರಾಗಿ, ಸಹಾಯಕ ಪ್ರಾಧ್ಯಾಪಕರಾಗಿ, ಕನ್ನಡ ವಿಶ್ವ ವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕರಾಗಿ, ಜಾನಪದ ವಿಭಾಗದ ಮುಖ್ಯಸ್ಥರಾಗಿ, ಹಾವೇರಿಯ ಜಾನಪದ ವಿವಿ ಸಿಂಡಿಕೇಟ್ ಸದಸ್ಯರಾಗಿ ನಾಡಿನ ಸಂವೇದನಾ ಶೀಲ ಬರಹಗಾರರಾಗಿದ್ದ ಮೊಗಳ್ಳಿ ಅವರ ನಿಧನ ಕನ್ನಡ ಸಾಹಿತ್ಯ ಪರಂಪರೆಗೆ ಬಹುದೊಡ್ಡ ನಷ್ಟ. ಅವರ ನಿಧನದಿಂದ ಕನ್ನಡ ಸಾಹಿತ್ಯ ಪರಂಪರೆ ನವೀನತೆಯ ಕೊಂಡಿಯೊಂದು ಕಳಚಿದೆ ಎಂದು ವಿಷಾದಿಸಿದರು.

ಡಾ.ಮೊಗಳ್ಳಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ, ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಜಾನಪದ ಪರಿಷತ್ತಿನ ಕಾರ್ಯದರ್ಶಿ ಶೀಳನೆರೆ ಶಿವಕುಮಾರ್, ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಜಿಲ್ಲಾ ಕರವೇ ಅಧ್ಯಕ್ಷ ಡಿ.ಎಸ್.ವೇಣು, ತಾಲೂಕು ಕರವೇ ಅಧ್ಯಕ್ಷ ಟೆಂಪೂ ಶ್ರೀನಿವಾಸ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಕನ್ನಡ ಪಂಡಿತ ಚಾ.ಶಿ.ಜಯಕುಮಾರ್. ಪುರ ನಾಗರಾಜು, ನಿವೃತ್ತ ಪೋಲೀಸ್ ಅಧಿಕಾರಿ ರಮೇಶ್, ಸಿಂಧಘಟ್ಟ ಸೋಮಸುಂದರ್ ಮತ್ತಿತರರು ಮಾತನಾಡಿದರು.