ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಷೇರುದಾರರು, ಹಾಲು ಉತ್ಪಾದಕ ರೈತರು ಐಕನಹಳ್ಳಿಕೊಪ್ಪಲು ಡೇರಿ ಕಾರ್ಯದರ್ಶಿ, ಅಧ್ಯಕ್ಷೆ ನಿವಾಸಗಳ ಎದುರು ಸೋಮವಾರ ಹಾಲು ಸುರಿದು ಪ್ರತಿಭಟನೆ ನಡೆಸಿದರು.ಗ್ರಾಮದ ಡೇರಿಗೆ ಹಾಲು ಸರಬರಾಜು ಮಾಡುವ ರೈತರು, ಉತ್ಪಾದಕರು ಡೇರಿ ಅಧ್ಯಕ್ಷೆ, ಕಾರ್ಯದರ್ಶಿ ಮನೆಗಳ ಎದುರು ಆಗಮಿಸಿ ಧರಣಿ ನಡೆಸಿ, ಡೇರಿಗೆ ವಿತರಿಸಲು ಹಾಲಿನ ಕ್ಯಾನ್‌ನಲ್ಲಿದ್ದ ಸುಮಾರು 450 ಲೀಟರ್ ಹಾಲನ್ನು ಸುರಿದು ಧಿಕ್ಕಾರದ ಘೋಷಣೆ ಕೂಗಿದರು.
ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಬೇಕಿರುವ ಡೇರಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಡೇರಿ ಕಾರ್ಯದರ್ಶಿ ಯಶೋಧಾ ದೇವೇಗೌಡ, ಅಧ್ಯಕ್ಷೆ ರಾಧಾ ಕುಮಾರ್ ಇಬ್ಬರು ಸಂಬಂಧಿಕರಾಗಿದ್ದಾರೆ. ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಆಗ್ರಹಿಸಿದರು.ಸಂಘದಲ್ಲಿ ಲಕ್ಷಾಂತರ ರು. ಭ್ರಷ್ಟಾಚಾರವಾಗಿದೆ. ನಡೆದಿರುವ ಹಗರಣದ ವಿರುದ್ಧ ಹಾಲು ಉತ್ಪಾದಕರು, ಷೇರುದಾರರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ತನಿಖೆಗಾಗಿ ದೂರು ನೀಡಲಾಗಿದೆ. ತಾವು ತಪ್ಪಿತಸ್ಥರಾಗುವ ಭಯದಿಂದ ಸಂಘದ ನಿರ್ದೇಶಕರಿಗೆ ತಿಳಿಯದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏಕಾಏಕಿ ಇವರ ಗೈರಿನಿಂದ ಹಾಲು ಉತ್ಪಾದಕರಿಗೆ ಅನ್ಯಾಯ, ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘ ರೈತರ ಬದುಕಿಗೆ ಸಂಜೀವಿನಿಯಾಗಬೇಕಿತ್ತು. ಡೇರಿಗೆ ನಾಲ್ಕೈದು ದಿನಗಳಿಂದ ಕಾರ್ಯದರ್ಶಿ ಬಾರದ ಕಾರಣ ಹಾಲು ವಿತರಣೆಯ ಕಂಪ್ಯೂಟರ್ ಬಿಲ್ ಸಿಗುತ್ತಿಲ್ಲ. ಎಷ್ಟು ಹಾಲು ಹಾಕಿದ್ದು, ಇದರ ಹಣದ ಮಾಹಿತಿ ಸಿಗದಾಗಿದೆ. ಇವರ ದುಂಡಾವರ್ತನೆಯಿಂದ ಷೇರುದಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಆಗಬೇಕು ಎಂದು ಮುಖಂಡ ಕಾಂತರಾಜು ಲೇವಡಿ ಮಾಡಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಮೂರ್ತಿ, ಕಾಂತರಾಜು, ನಾಗರಾಜು, ಪ್ರದೀಪ್, ಗುಂಡ, ಮಂಜಣ್ಣ, ಆನಂದ, ರವಿ, ವೆಂಕಟೇಶ, ನಾಗೇಶ್, ಮಂಜಣ್ಣ, ದಿವಾಕರ, ಪ್ರಸನ್ನ, ದಿಲೀಪ್, ಪ್ರಕಾಶ್, ಸಾಗರ್,ಜಯಮ್ಮ ಮತ್ತಿತರರು ಇದ್ದರು.ಡೇರಿ ಅಧ್ಯಕ್ಷೆ ರಾಧಾಕುಮಾರ್ ಅನಾರೋಗ್ಯದಿಂದ ರಾಜೀನಾಮೆ ನೀಡಲಾಗಿದೆ. ತನ್ನಿಂದ ಯಾವುದೇ ಅನ್ಯಾಯ, ಮೋಸವಾಗಲಿ ಆಗಿಲ್ಲ. ಬೇಕಿದ್ದಲ್ಲಿ ಮೇಲಾಧಿಕಾರಿಗಳು ತನಿಖೆ ಮಾಡಲಿ.
- ಯಶೋಧಾ ದೇವೇಗೌಡ, ಡೇರಿ ಕಾರ್ಯದರ್ಶಿ