ಹನುಮಸಾಗರ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಹಿಳೆಯರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಸುಮಾರು 15 ದಿನಗಳಿಂದ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಮಹಿಳೆಯರು ಆಗ್ರಹಿಸಿದರು. ವಿಶೇಷವಾಗಿ ತಮ್ಮ ವಾರ್ಡ್‌ನಲ್ಲಿ ಎಂಟು ದಿನಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದ್ದು, ಅದೂ ನಿಧಾನವಾಗಿ ನೀರು ಬರುತ್ತಿದೆ. ಇದರಿಂದ ಮನೆ ಬಳಕೆಗೆ ಹಾಗೂ ಕುಡಿಯಲು ಬೇಕಾದಷ್ಟು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.“ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣವೇ ಬೇರೆ ವಾರ್ಡ್‌ಗಳಿಗೆ ತೆರಳಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆ ಕಾಲ ಆರಂಭವಾಗಿರುವುದರಿಂದ ನೀರಿನ ಬಳಕೆ ಹೆಚ್ಚಾಗಿದೆ. ಆದರೆ ನೀರು ಸರಿಯಾಗಿ ದೊರೆಯದ ಕಾರಣ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಈ ಸಮಸ್ಯೆ ಕುರಿತಂತೆ ಮಾಜಿ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ತಮ್ಮ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆ ವೇಳೆ ಪಟ್ಟಣ ಪಂಚಾಯಿತಿಯ ಮೇಲಧಿಕಾರಿಗಳು ಕಚೇರಿಯಲ್ಲಿ ಹಾಜರಿರಲಿಲ್ಲ. ನಂತರ ಮಹಿಳೆಯರು ಪಂಚಾಯಿತಿ ಸಿಬ್ಬಂದಿಗೆ ಸಮಸ್ಯೆಯನ್ನು ವಿವರಿಸಿ, ಕೂಡಲೇ ನೀರು ಬಿಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ನೀರಿನ ಸಮಸ್ಯೆ ತಕ್ಷಣ ಪರಿಹಾರವಾಗದಿದ್ದರೆ ಖಾಲಿ ಕೊಡಗಳೊಂದಿಗೆ ಮತ್ತೆ ಪಟ್ಟಣ ಪಂಚಾಯಿತಿ ಕಚೇರಿಗೆ ಬಂದು ಉಗ್ರ ಹೋರಾಟ ನಡೆಸುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದರು.