ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ

| Published : Sep 29 2024, 01:33 AM IST

ಸಾರಾಂಶ

ತ್ಯಾಜ್ಯದಿಂದ ಉಂಟಾಗುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ದೃಷ್ಟಿಯಲ್ಲಿ ಪರಿಸರ ಸ್ವಚ್ಛತೆ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡರು ತಿಳಿಸಿದರು.

ಕನ್ನಡಪ್ರಭ ವಾರ್ತೆ ನ್ಯಾಮತಿ

ತ್ಯಾಜ್ಯದಿಂದ ಉಂಟಾಗುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ದೃಷ್ಟಿಯಲ್ಲಿ ಪರಿಸರ ಸ್ವಚ್ಛತೆ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡರು ತಿಳಿಸಿದರು.

ತಾಲೂಕಿನ ಸವಳಂಗ ಗ್ರಾಮದಲ್ಲಿ ಶುಕ್ರವಾರ ನೂತನ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಯ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಇದ್ದರೆ, ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ. ಆದ್ದರಿಂದ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿ ಕಸಮುಕ್ತ ಗ್ರಾಮವನ್ನಾಗಿ ಮಾಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಹೇಳಿದರು.

ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಕಾಲಕ್ಕೆ ಸರಿಯಾಗಿ ಕರವಸೂಲಾತಿ ಮಾಡಿದರೆ ಕಸ ನಿರ್ವಹಣೆ ಮಾಡುವ ಕೆಲಸಗಾರರಿಗೆ ವೇತನ ನೀಡಬಹುದು. ಈ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಗ್ರಾಮದಲ್ಲಿ ಅನೇಕ ಸಮಸ್ಯೆಗಳನ್ನು ಗ್ರಾ.ಪಂ ಸದಸ್ಯರು ಗಮನಕ್ಕೆ ತಂದಿದ್ದಾರೆ. ಎಲ್ಲರ ಜತೆ ಸೇರಿ ಪಕ್ಷಾತೀತವಾಗಿ ಕೆಲಸ ನಿರ್ವಹಿಸಲು ಬದ್ಧನಿದ್ದೇನೆ. ನೀವು ಸಹ ಗ್ರಾ.ಪಂ.ಗೆ ಯಾರೇ ಬಂದರೂ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದರೆ ನಿಮ್ಮ ಬಗ್ಗೆ ಮತ್ತಷ್ಟು ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.

ಪಂಪ್‌ಸೆಟ್‌ಗಳಿಗೆ ಆಧಾರ್‌ ಲಿಂಕ್‌ ಮಾಡುವ ಆದೇಶವನ್ನು ಸರ್ಕಾರ ಹೊರಡಿಸಿದೆ. ಅದಕ್ಕೆ ರೈತರು ತಪ್ಪು ಕಲ್ಪನೆ ತಿಳಿಯುವುದು ಬೇಡ ಪಂಪ್‌ಸೆಟ್‌ಗಳಿಗೆ ಬಳಸುವ ಉಚಿತ ವಿದ್ಯುತ್‌ ಎಷ್ಟು ಬಳಕೆಯಾಗುತ್ತದೆ, ಎಷ್ಟು ಜನರಿಗೆ ಉಪಯೋಗವಾಗುತ್ತಿದೆ ಎಂದು ಅರಿಯುವುದಕ್ಕೆ ಆಧಾರ್‌ ಲಿಂಕ್‌ ಜೋಡಣೆ ಕೇಳುತ್ತಿದೆ ಹೊರತು ಉಚಿತ ವಿದ್ಯುತ್‌ ತೆಗೆದು ಹಾಕುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌ ಅರುಣ್‌ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಮಾಡುವುದು ಮುಖ್ಯವಲ್ಲ. ಅದರ ನಿರ್ವಹಣೆ ಮಾಡುವ ಮಹಿಳೆಯರಿಗೆ ವೇತನವನ್ನು ಸಕಾಲಕ್ಕೆ ಕೊಡುವುದು ಮುಖ್ಯ. ಅದಕ್ಕಿಂತ ಮುಖ್ಯ ಗ್ರಾಮದಲ್ಲಿ ಸ್ವಚ್ಛತೆ ನೋಡಿಕೊಳ್ಳುವುದು ಎಂದರು.

ಗ್ರಾ.ಪಂ ಅಧ್ಯಕ್ಷ ಗಿರೀಶ್‌ ಪಾಟೀಲ್‌ ಮಾತನಾಡಿದರು. ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಬಸವರಾಜಪ್ಪ, ರಾಜಪ್ಪ ನಾಗರಾಜ್‌ ನಾಯ್ಕ, ಕೃಷ್ಣಪ್ಪ, ಲಲಿತಮ್ಮ, ನೇತ್ರಾವತಿ, ಗಾಯಿತ್ರಿ, ವಸಂತ, ನೀಲಬಾಯಿ, ರತ್ನಮ್ಮ, ರುಕ್ಮಿಣಿಬಾಯಿ, ಪಿಡಿಓ ವೇದಾವತಿ, ಕಾರ್ಯದರ್ಶಿ ಅಂಜುನಾಯ್ಕ ಮತ್ತಿತರರಿದ್ದರು.