ಸಮಾಜಕ್ಕೆ ಹರಳಯ್ಯ ಕೊಡುಗೆ ಅಪಾರ: ಸಾಹಿತಿ ಕೆ. ವಸಂತ್ ಕುಮಾರ್

| Published : Sep 29 2024, 01:32 AM IST

ಸಾರಾಂಶ

ಹರಳಯ್ಯ ೧೨ನೆಯ ಶತಮಾನದ ಬಸವಣ್ಣರ ಸಮಕಾಲೀನರಾಗಿದ್ದಾರೆ. ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರುಲಿಂಗ ಜಂಗಮ ಸೇವೆಗೆ ತನ್ನ ತನು ಮನ ಧನ ಮುಡಿಪಾಗಿಟ್ಟಿದ್ದರು ಎಂದು ಸಾಹಿತಿ ಕೆ. ವಸಂತ್ ಕುಮಾರ್ ಹೇಳಿದರು. ವಿಜಯಪುರದಲ್ಲಿ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

354ನೇ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ವಿಜಯಪುರ

ಹರಳಯ್ಯ ೧೨ನೆಯ ಶತಮಾನದ ಬಸವಣ್ಣರ ಸಮಕಾಲೀನರಾಗಿದ್ದಾರೆ. ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರುಲಿಂಗ ಜಂಗಮ ಸೇವೆಗೆ ತನ್ನ ತನು ಮನ ಧನ ಮುಡಿಪಾಗಿಟ್ಟಿದ್ದರು ಎಂದು ಸಾಹಿತಿ ಕೆ. ವಸಂತ್ ಕುಮಾರ್ ಹೇಳಿದರು.

ಪಟ್ಟಣದ ಶ್ರೀ ವೀರಭದ್ರಸ್ವಾಮಿ ಅಕ್ಕನ ಬಳಗ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆದ 354ನೇ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯದಲ್ಲಿ ಭೇಟಿಯಾದ ಹರಳಯ್ಯ ಶರಣು ಬಸವರಸ ಎಂದು ತಲೆಬಾಗಿ ವಂದಿಸಿದ. ಅದಕ್ಕೆ ಪ್ರತಿಯಾಗಿ ಬಸವಣ್ಣ ಶರಣು, ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದರು. ತನ್ನ ಒಂದು ಶರಣಾರ್ಥಿಗೆ ಬಸವಣ್ಣ ಎರಡು ಶರಣಾರ್ಥಿ ಹೇಳಿದ, ಬಸವಣ್ಣನ ಒಂದು ಶರಣಾರ್ಥಿ ತನ್ನ ಮೇಲೆ ಹೊರೆಯಾಗಿ ಕುಳಿತಂತೆ ಹರಳಯ್ಯನಿಗೆ ಭಾಸವಾಯಿತು. ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದ ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು ಎಂದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆ ತಯಾರಿಸಿ ಬಸವಣ್ಣರಿಗೆ ಕೊಟ್ಟರು. ಬಸವಣ್ಣ ಅವುಗಳ ಶ್ರೇಷ್ಠತೆಯನ್ನು ಹೊಗಳಿ ಅವನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದ ಎಂಬುದಾಗಿ ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿ ಸೂತ್ರ ರತ್ನಾಕರ, ಶರಣ ಲೀಲಾಮೃತ ಗ್ರಂಥಗಳಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.

ಶ್ರೀ ಪಿ ಚಂದ್ರಪ್ಪ ಮತ್ತು ಕುಟುಂಬದವರು ಹಿರಿಯರ ಸ್ಮರಣೆಯಲ್ಲಿ ಹಿರಿಯ ನಾಗರಿಕರಿಗೆ ಸಹಾಯಧನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದರು. ವಿ. ಅನಿಲ್ ಕುಮಾರ್, ಸಿ.ಬಸಪ್ಪ, ಉಪಾಧ್ಯಕ್ಷ ಅಂಬಾ ಭವಾನಿ, ಮ. ಸುರೇಶ್ ಬಾಬು ಬಿ.ಪುಟ್ಟರಾಜಣ್ಣ ಇದ್ದರು.