ಉಪ್ಪಿನಂಗಡಿ: ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಯಜ್ಞ ಯಾಗಾದಿಗಳು ಆ ಕ್ಷೇತ್ರಕ್ಕೆ ಮಾತ್ರ ಸಂಬಂಧಪಡದೆ ಲೋಕ ಕಲ್ಯಾಣದ ದೃಷ್ಟಿಯಿಂದ ನಡೆಯುತ್ತವೆ. ಭೇದ ಭಾವವನ್ನು ಮರೆತು ನಾವು ಮಾಡುವ ಪ್ರಾರ್ಥನೆಯಿಂದ ಸಮಾಜಕ್ಕೆ ಭಗವದನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರುಗಿದ ಶ್ರೀ ಮಹಾವಿಷ್ಣುಯಾಗ ಸಂದರ್ಭದಲ್ಲಿ ದೇವಸ್ಥಾನದ ಹೊರಾಂಗಣಕ್ಕೆ ಶಾಶ್ವತ ಮೇಲ್ಚಾವಣಿ ಅಳವಡಿಸುವ ಕಾರ್‍ಯಕ್ಕೆ ಚಾಲನೆ ನೀಡಿದರು.ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್, ಖಜಾಂಜಿ ಅನಾರು ಕೃಷ್ಣಶರ್ಮ ಉಪಸ್ಥಿತರಿದ್ದರು. ಬಾರ್ಯ ಶ್ರೀ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡದ ಪ್ರವೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಮೇಲ್ಚಾವಣಿ ಅಳವಡಿಸುವ ಕಾರ್‍ಯಕ್ಕೆ ದೇಣಿಗೆ ಡಿದ ಬಲರಾಮ ಆಚಾರ್ಯ ಪುತ್ತೂರು, ಅನಂತ ಕೃಷ್ಣ ಪಡ್ಡಿಲ್ಲಾಯ, ಪ್ರೊ. ಎ. ವಿ. ನಾರಾಯಣ ಪುತ್ತೂರು, ಅಗಸ್ತ್ಯ ಶಿವಪೇಟೆ ಪುತ್ತೂರು, ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರಶಾಂತ ಬಾರ್ಯ ಅವರನ್ನು ಸ್ವಾಮೀಜಿ ಗೌರವಿಸಿದರು.ಸಮಾರಂಭದಲ್ಲಿ ಉಪಸ್ಥಿತರಿದ್ದ ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಧರ್ಮದರ್ಶಿ ಡಾ. ಯೋಗೀಂದ್ರ ಭಟ್ ಮಾತನಾಡಿ, ಭೌತಿಕವಾದಂತಹ ಸಂಪತ್ತು ಎಲ್ಲ ಕಡೆಯಿದ್ದರೂ ಭಾರತ ದೇಶವು ಧಾರ್ಮಿಕ ಶಕ್ತಿಯಿಂದ ಸೂರ್ಯನ ತೇಜಸ್ಸಿನಂತೆ ವಿಶ್ವವನ್ನು ಬೆಳಗಿಸುತ್ತದೆ ಎಂದರು.
ಮುಖ್ಯ ಅತಿಥಿ ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ಪುತ್ತೂರು ಶುಭ ಹಾರೈಸಿದರು. ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಸೇವಾ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿದರು. ಪ್ರಶಾಂತ ಬಾರ್ಯ ದಂಪತಿ ಸ್ವಾಮೀಜಿಗೆ ಫಲಪುಷ್ಪ ಸಮರ್ಪಿಸಿದರು.
ನವೀನ ಶ್ರೀನಿವಾಸ್ ಪ್ರಾರ್ಥಿಸಿದರು. ಟ್ರಸ್ಟಿಗಳಾದ ಮೋನಪ್ಪ ಗೌಡ , ಶೇಷಪ್ಪ ಸಾಲಿಯನ್, ರಾಮಣ್ಣ ಗೌಡ, ಶಿವರಾಮ, ಮೋನಪ್ಪ ಗೌಡ, ಪ್ರಶಾಂತ ಪೈ ಬಾರ್ಯ ವಿವಿಧ ಕಾರ್‍ಯಕ್ರಮಗಳನ್ನು ನಿರ್ವಹಿಸಿದರು. ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿ, ಬಾರ್ಯ ಸಿಎ ಬ್ಯಾಂಕಿನ ನಿರ್ದೇಶಕ ನವೀನ ರೈ ವಂದಿಸಿದರು.
(ಯುಪಿಪಿ_ಎಪ್ರಿಲ್೧೪_೧)