ವಿದ್ಯೆ, ಬುದ್ಧಿಗಿಂತ ಪ್ರಜ್ಞಾವಂತಿಗೆ ಮುಖ್ಯ: ಹುಲಿಕಲ್‌

| Published : Oct 20 2023, 01:00 AM IST / Updated: Oct 20 2023, 01:01 AM IST

ವಿದ್ಯೆ, ಬುದ್ಧಿಗಿಂತ ಪ್ರಜ್ಞಾವಂತಿಗೆ ಮುಖ್ಯ: ಹುಲಿಕಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಞಾನದ ಆಚರಣೆಗಳಿಂದಾಗಿ ಜೀವನವನ್ನು ನಾಶ ಮಾಡಿಕೊಳ್ಳದಿರಿ, ವಚನದ ನೆಲೆಗಳು ಗೋಷ್ಠಿ
ಬಸವಕಲ್ಯಾಣ: ನಮ್ಮ ಮಕ್ಕಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಪವಾಡ ಬಯಲು ತಜ್ಞ ಡಾ. ಹುಲಿಕಲ್‌ ನಟರಾಜ ನುಡಿದರು. ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ 4ನೇ ದಿನ ಗುರುವಾರ ಅಂಧಶ್ರದ್ಧೆ ನಿವಾರಣೆಗಾಗಿ ವಚನದ ನೆಲೆಗಳು ಗೋಷ್ಠಿಯಲ್ಲಿ ಮುಖ್ಯ ಅನುಭಾವ ನೀಡಿದ ಅವರು, ಎಲ್ಲರೂ ಬಸವತತ್ವ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆಗಿಂತ ಪ್ರಜ್ಞಾವಂತಿಕೆ ಬಹಳ ಮುಖ್ಯ ಎಂದರು. ವೈಜ್ಞಾನಿಕತೆ ಬಿತ್ತಬೇಕಾದ ಮಾಧ್ಯಮಗಳು ಮೂಢನಂಬಿಕೆ ಬಿತ್ತುತ್ತಿವೆ: ವೈಜ್ಞಾನಿಕತೆಯನ್ನು ಬಿತ್ತಬೇಕಾದ ಮಾಧ್ಯಮಗಳು ಮೂಢನಂಬಿಕೆಯನ್ನು ಬಿತ್ತುತ್ತಿವೆ. ಸಮಾಜದಲ್ಲಿ ಮನು ಧರ್ಮಕ್ಕಿಂತ ಮನೋಧರ್ಮ ಮುಖ್ಯ ಎಂದು ಅವರು ಬೇಸರ ವ್ಯಕ್ತಪಡಿಸಿದ ಅವರು ಮೋಸ ಮಾಡುವ ದೇವರು ದೇವರಲ್ಲ. ಇಂದಿನ ಸಮಾಜದಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಹಾಗೂ ನಿಧಿ ಹುಡುಕುವ ನೆಪದಲ್ಲಿ ಜನರನ್ನು ವಂಚಿಸಲಾಗುತ್ತಿದೆ. ತೆಂಗಿನಲ್ಲಿ ಚಿನ್ನದ ಸರ, ಕೈಯಲ್ಲಿ ಬೆಂಕಿ ಹೇಗೆ ಬರುತ್ತದೆ. ಹಾಲು ಹೇಗೆ ಉಕ್ಕುತ್ತವೆ ಎಂಬುವದನ್ನು ಪ್ರಾಯೋಗಿಕವಾಗಿ ತೋರಿಸಿ ಇವುಗಳ ಬಗ್ಗೆ ಅರಿವು ಇರಲಿ ಎಂದರು. ಮೂಡನಂಬಿಕೆಗೆ ಬೆನ್ನು ಹತ್ತದೆ ವೈಜ್ಞಾನಿಕವಾಗಿ ಗಟ್ಟಿಯಾಗಿ ನಿಲ್ಲಬೇಕು. ಜೀವನದಲ್ಲಿ ಚಾಚೂ ತಪ್ಪದೇ ಶರಣರು ಹೇಳಿದ ವಿಚಾರಗಳನ್ನು ಅಳವಡಿಸಿಕೊಂಡರೆ ಅದ್ಬುತ ಪರಿವರ್ತನೆಯಾಗುತ್ತದೆ. ಗುರು ಬಸವಣ್ಣನವರು ಮಾಡಿದ ಕ್ರಾಂತಿ ಅವರ ಹಿಂದೆಯೂ ಆಗಿಲ್ಲ ಇನ್ನು ಮುಂದೆಯೂ ಆಗಲ್ಲ. ಅಭಿನವ ಬಸವಣ್ಣ ಆಗಬಹುದೇ ಹೊರತು ಬಸವಣ್ಣನಾಗಲು ಯಾರಿಂದಲೂ ಸಾಧ್ಯವಿಲ್ಲ. ಪರ ಧನ ಪರಸತಿಗೆ ಎರಗದೆ ನಡೆ ನುಡಿ ಒಂದಾಗಬೇಕು ಜೀವನದಲ್ಲಿ ನಿಷ್ಠೆಯಿಂದ ಬಸವ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಡಾ.ಶಿವಾನಂದ ಮಹಾಸ್ವಾಮಿಗಳು ನುಡಿದರು. ನೇತೃತ್ವ ವಹಿಸಿಕೊಂಡಿದ್ದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಅಜ್ಞಾನದಿಂದ ಮಾಡುವ ಆಚರಣೆಗಳಿಂದ ಜೀವನ ನಾಶ ಮಾಡಿಕೊಳ್ಳದೆ ಮೌಢ್ಯತೆಯಿಂದ ಹೊರಬಂದು ಬಸವಾದಿ ಶರಣರು ನೀಡಿದ ವೈಚಾರಿಕತೆಯಿಂದ ಬದುಕಿ ಪರಿಪೂರ್ಣ ಜೀವನ ನಡೆಸಬೇಕು ಶರಣ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದರು. ಬಿಡಿಪಿಸಿ ನಿರ್ದೇಶಕ ಸುಭಾಷ ಹೊಳಕುಂದೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಖಾಜಾ ಮಿಸ್ಬಾವುಲ್ಲಾ ಜಾಗಿರದಾರ ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ, ಪ್ರದೀಪ ವಾತಾಡೆ, ತಹಸೀನ ಅಲಿ ಜಮಾದಾರ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಕಂಟೆಪ್ಪ ದಾನಾ, ಚನ್ನಬಸವಪ್ಪ ವಡ್ಡನಕೇರೆ, ಮಡಿವಾಳಯ್ಯ ಸ್ವಾಮಿ, ಜಗನ್ನಾಥ ಶಾಶೆಟ್ಟಿ, ವಿಜಯಲಕ್ಷ್ಮಿ ಪಾಟೀಲ್‌ ವಿದ್ಯಾವತಿ ಬಿರಾದಾರ, ಪ್ರವೀಣ ಮಲಶೆಟ್ಟಿ ಉಪಸ್ಥಿತರಿದ್ದರು. ರವೀಂದ್ರ ಕೊಳಕೂರ ಸ್ವಾಗತಿಸಿದರೆ ಮಹೇಶ ಸುಂಟನೂರೆ ನಿರೂಪಿಸಿದರು.