19ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ರಜನೀಕಾಂತ್ ರನ್ನು ವಶಕ್ಕೆ ಪಡೆದಿರುವ ತಹಸೀಲ್ದಾರ್ ರಶ್ಮಿ. | Kannada Prabha
Image Credit: KP
ಬಂಗಾರಪೇಟೆ ಪಟ್ಟಣದಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿದ್ದ ಆರೋಪದ ಮೇರೆಗೆ ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಪ್ರಗತಿ ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ.
ಬಂಗಾರಪೇಟೆ: ಪಟ್ಟಣದಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿದ್ದ ಆರೋಪದ ಮೇರೆಗೆ ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಗುರುವಾರ ಪ್ರಗತಿ ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ. ಪಟ್ಟಣದ ದೇಶಿಹಳ್ಳಿ ಬಡಾವಣೆಯಲ್ಲಿ ಕಾಮಸಮುದ್ರಕ್ಕೆ ಹೋಗುವ ರಸ್ತೆಯಲ್ಲಿ ಕಳೆದ ಆರು ತಿಂಗಳಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಪ್ರಗತಿ ಕ್ಲಿನಿಕ್ ಹೆಸರಲ್ಲಿ ರಜನೀಕಾಂತ್ ಎಂಬಾತ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದ. ರಜನೀಕಾಂತ್ ಎಂಬಾತ ಅಸಲಿಗೆ ವೈದ್ಯರೇ ಅಲ್ಲ ಎಂಬ ಮಾಹಿತಿ ಮೇರೆಗೆ ತಹಸೀಲ್ದಾರ್ ರಶ್ಮಿ ಮತ್ತು ಆರೋಗ್ಯ ಅಧಿಕಾರಿಗಳ ಜೊತೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಪ್ರಗತಿ ಕ್ಲಿನಿಕ್ ನಕಲಿ ಎಂಬುವುದು ದೃಢಪಟ್ಟಿದೆ. ಈ ಬಗ್ಗೆ ಮಾತನಾಡಿದ ತಹಸೀಲ್ದಾರ್ ರಶ್ಮಿ, ಯಾವುದೇ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಳೆದ ಮೂರು ವಾರಗಳಿಂದ ಗಮನಿಸಿ ಗುರುವಾರ ದಾಳಿ ಮಾಡಿ ರಜನೀಕಾಂತ್ ಎಂಬುವವರು ನಡೆಸುತ್ತಿದ್ದ ನಕಲಿ ಕ್ಲಿನಿಕನ್ನು ಸೀಜ್ ಮಾಡಿದ್ದೇವೆ. ಈ ಕ್ಲಿನಿಕ್ ನಡೆಸುತ್ತಿರುವವವರ ಬಳಿ ಪರವಾನಗಿ ಇರುವುದಿಲ್ಲ. ಜೊತೆಗೆ ಕ್ಲಿನಿಕ್ ನಡೆಸುತ್ತಿರುವವರು ಈ ಹಿಂದೆಯೂ ಒಮ್ಮೆ ಕೆಜಿಎಫ್ ನಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿರುವಾಗ ಸೀಜ್ ಆಗಿ ಇನ್ನು ಮುಂದೆ ಕ್ಲಿನಿಕ್ ತೆರೆಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಬಳಿ ಹೇಳಿಕೆ ನೀಡಿದ್ದರು. ಇಷ್ಟಾದರೂ ಕೆಜಿಎಫ್‌ನಿಂದ ಬಂದು ಪಟ್ಟಣಲ್ಲಿ ಹಳೇ ಚಾಲಿಯನ್ನು ಮುಂದುವರೆಸಿದ್ದಾರೆ ಎಂದರು. ಕ್ಲಿನಿಕನ್ನು ಪರಿಶೀಲಿಸಿದಾಗ ಔಷಧಿಗಳನ್ನು ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಹೈಕೋರ್ಟ್ ಆದೇಶದಂತೆ ಇವರು ಕ್ಲಿನಿಕ್ ತೆರೆಯುವಂತಿಲ್ಲ. ಇವರು ನೋಂದಾಯಿತ ವೈದ್ಯರಲ್ಲ. ಕೆಪಿಎಂಇ ನೋಂದಣಿ ಕೂಡ ಇವರ ಬಳಿ ಇಲ್ಲ ಎಂದು ತಿಳಿದುಬಂದಿದೆ ಎಂದರು. ತಾಲೂಕಿನಾದ್ಯಂತ ಎಲ್ಲೆಲ್ಲಿ ನಕಲಿ ಕ್ಲಿನಿಕ್ ಗಳು ನಡೆಸಲಾಗುತ್ತಿದೆಯೋ ಅವರಿಗೆಲ್ಲ ಇದು ಎಚ್ಚರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಪರಿಶೀಲನೆ ನಡೆಸಿ ನಕಲಿ ಕ್ಲಿನಿಕ್ ಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಇಂತಹ ನಕಲಿ ಕ್ಲಿನಿಕ್ ತೆರೆಯುವವರಿಗೆ ಕಟ್ಟಡ ಬಾಡಿಗೆಗೆ ಕೊಡುವವರೂ ಎಚ್ಚರವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೋಂದಾಯಿತ ವೈದ್ಯರಿಗೆ ಮಾತ್ರ ಕಟ್ಟಡ ಬಾಡಿಗೆಗೆ ಕೊಡಬೇಕು ಎಂದು ಮಾಲೀಕರಿಗೆ ಸಲಹೆ ನೀಡಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಿಯದರ್ಶಿನಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಸಿಬ್ಬಂದಿ ಶಶಿಧರ್ ಸಿಂಗ್ ,ಆರೋಗ್ಯಾಧಿಕಾರಿ ಆದರ್ಶ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.