ಹೊಸಪೇಟೆ: ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ. ಶಿಕ್ಷಣ ಕೇವಲ ಪದವಿ ಪಡೆಯುವುದಲ್ಲ. ಅನ್ಯಾಯವನ್ನು ಪ್ರಶ್ನಿಸುವುದು. ತನ್ನನ್ನು ತಾನು ಅರಿತುಕೊಳ್ಳುವಲ್ಲಿ ಸಾಮಾಜಿಕ ಚೌಕಟ್ಟನ್ನು ಮೀರಿ ಯೋಚಿಸುವುದರಲ್ಲಿ ಶಿಕ್ಷಣ ಅವಶ್ಯವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ. ಜ್ಯೋತಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಪಂಪ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಶಿಕ್ಷಣ, ಉದ್ಯೋಗ ಮತ್ತು ಆತ್ಮ ಗೌರವ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಂಪ್ರದಾಯ, ಆಚರಣೆ,. ಪದ್ಧತಿಗಳ ಮೂಲಕ ತಮ್ಮ ಜೀವನ ಕಟ್ಟಿಕೊಳ್ಳುವುದನ್ನು ಮರೆಯುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ಮಹಿಳೆಯರದ್ದೇ ಮೇಲುಗೈ ಇದ್ದರೂ, ಉದ್ಯೋಗ ಕ್ಷೇತ್ರದಲ್ಲಿ ಪುರುಷರೇ ಸದೃಢರಾಗಿದ್ದಾರೆ. ಪ್ರಸ್ತುತ ದಿನದಲ್ಲಿ ಮಹಿಳೆಯರಿಗೆ ಸಾಕಷ್ಟು ಸವಲತ್ತುಗಳಿದ್ದು ಹಾಗೂ ಕಾನೂನಿನ ರಕ್ಷಣೆ ಇದ್ದು, ಎಲ್ಲವನ್ನು ಸರಿಯಾದ ಕ್ರಮದಲ್ಲಿ ಮಹಿಳೆಯರು ಬಳಸಿಕೊಳ್ಳಬೇಕು ಎಂದು ಹೇಳಿದರು.

ಹಂಪಿ ವಿವಿಯ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪಂಚದ ಮಹಿಳೆಯರು ಎಲ್ಲೆಡೆ ಒಂದೇ ರೀತಿಯ ಸ್ಥಿತಿಯಲ್ಲಿಲ್ಲ. ಪ್ರಾಚೀನ ಕಾಲದಿಂದಲೂ ಮಹಿಳೆಯರ ಮೇಲಿನ ಶೋಷಣೆ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಗೌರವ ದೊರಕಲು ಎಲ್ಲರೂ ಸೇರಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಹಂಪಿ ವಿವಿಯ ಮಹಿಳಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ, ಮುಖ್ಯಸ್ಥೆ ಡಾ. ಶೈಲಜಾ ಇಂ. ಹಿರೇಮಠ ಮಾತನಾಡಿ, ಸಾಮಾಜಿಕ ಧಾರ್ಮಿಕ, ಲಿಂಗ ತಾರತಮ್ಯ, ಮಹಿಳೆಯರ ಶೋಷಣೆ, ಶಿಕ್ಷಣದಲ್ಲಿ ಶೋಷಣೆ, ಸಮಾನ ವೇತನ ಮತ್ತು ಆರ್ಥಿಕ ಉದ್ದೇಶದಿಂದ ಮಹಿಳೆಯರ ಆರೋಗ್ಯ ಮತ್ತು ಅಭಿವೃದ್ಧಿಯ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಮಹಿಳೆಯರ ಸಾಧನೆಗಳನ್ನು ಸಮಾಜ ಗುರುತಿಸಬೇಕು ಎಂದು ಹೇಳಿದರು.


ವಿವಿಧ ವಿಭಾಗದ ಪ್ರಾಧ್ಯಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಹಂಪಿ ಕನ್ನಡ ವಿಶ್ವವಿದ್ಯಾಲಯ ಪಂಪ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಶಿಕ್ಷಣ, ಉದ್ಯೋಗ ಮತ್ತು ಆತ್ಮ ಗೌರವ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ.ಜ್ಯೋತಿ ಮಾತನಾಡಿದರು.