ರೋಣ: ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನಾ, ಸ್ವದೇಶಿ ಭಾವನೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಕರ್ತವ್ಯ, ಈ 5 ಸಂಗತಿಗಳನ್ನು ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಸಮಾಜ ಪರಿವರ್ತನೆಯಾಗುತ್ತದೆ ಎಂದು ಪಾರಂಪರಿಕ ವೈದ್ಯ, ಹಿಂದೂ ಧರ್ಮ ಜಾಗರಣಾ ಉತ್ತರ ಪ್ರಾಂತ ಸಹ ಸಂಯೋಜಕ ಡಾ. ಹನುಮಂತ ಮಳಲಿ ತಿಳಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ದ್ರೋಣಪುರ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ಪೂರ್ವಿಕರ ಶ್ರಮ ಹಾಗೂ ಬಲಿದಾನದಿಂದ ಸನಾತನ ಹಿಂದೂ ಧರ್ಮವು ಜೀವಂತವಿದ್ದು, ಅದರ ಪಾಲನೆ ಮಾಡಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವಪೀಳಿಗೆ ನಮ್ಮ ಸಂಸ್ಕೃತಿ ಮರೆಯುತ್ತಿದ್ದು, ಧರ್ಮ ಹಾಗೂ ಸಂಸ್ಕೃತಿ ಉಳಿವಿಗಾಗಿ ಯುವಕರ ಪ್ರಯತ್ನ ಅಗತ್ಯವಿದೆ ಎಂದರು.ಆರ್‌ಎಸ್ಎಸ್ ಜನ್ಮಶತಾಬ್ದಿಯ ಹಿನ್ನೆಲೆ ಇಡೀ ದೇಶದಲ್ಲಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ದೇಶದಲ್ಲಿ 1.10 ಲಕ್ಷ ಹಿಂದೂ ಸಮ್ಮೇಳನ ಮಾಡಲಾಗಿದೆ. 49 ವಿವಿಧ ದೇಶಗಳಲ್ಲಿ ಹಿಂದೂ ಸಮಾವೇಶ ಮಾಡಲಾಗಿದೆ. ಆದರೆ, ನಮ್ಮ ದೇಶದಲ್ಲೇ ಹಿಂದು ಸಮ್ಮೇಳನ ಮಾಡಲು ಮತ್ತೊಬ್ಬರ ಅನುಮತಿ ಪಡೆಯುವ ಅನಿವಾರ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದೂ ಸಮ್ಮೇಳನ ಸಮಿತಿ ರೋಣ ಅಧ್ಯಕ್ಷ ಶಿವಣ್ಣ ಪಲ್ಲೇದ ಅವರನ್ನು ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಪ್ರಯುಕ್ತ ಭವ್ಯ ಶೋಭಾಯಾತ್ರೆಯು ಇಲ್ಲಿನ ರಾಘವೇಂದ್ರ ಕಲ್ಯಾಣಮಂಟಪದಿಂದ ಆರಂಭಗೊಂಡು ಪೋತರಾಜನಕಟ್ಟೆ, ಮುಲ್ಲಾನ ಬಾವಿ ವೃತ್ತ, ಸೂಡಿ ಕ್ರಾಸ್ ಮಾರ್ಗವಾಗಿ ಶರಣ ಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ವೇದಿಕೆಯಲ್ಲಿ ಕೊನೆಗೊಂಡಿತು.ಕೊಣ್ಣೂರ ಡೊಳ್ಳು ಕಲಾ ತಂಡಾ, ಸೂಡಿಯ ಚಂಡಿವಾಧ್ಯ, ಹರಪನಹಳ್ಳಿ ನಂದಿಕೋಲು ಕುಣಿತ ಗಮನ ಸೆಳೆದವು. ಸಾನ್ನಿಧ್ಯವನ್ನು ಗುಲಗಂಜಿಮಠದ ಗುರುಪಾದ ಸ್ವಾಮೀಜಿ, ಬೂದಿಶ್ವರ ಮಠದ ವಿಶ್ವನಾಥ ದೇವರು ವಹಿಸಿ ಆಶೀರ್ವಚನ ನೀಡಿದರು. ಹಿಂದೂ ಸಮ್ಮೇಳನ ರೋಣ ಉಪಾಧ್ಯಕ್ಷ ಭರಮಗೌಡ ಲಿಂಗನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾವೇಶದಲ್ಲಿ ಲೀಲಾದೇವಿ ಚಿತ್ರಗಾರ, ರವಿ ದಂಡಿನ, ಶೇಖಣ್ಣ ನವಲಗುಂದ, ರವಿ ಕೊಪ್ಪದ, ವೀರಣ್ಣ ಗದಗಿನ, ಪ್ರಶಾಂತ ಕೆಂದೂರ, ಬಸನಗೌಡ ಪಾಟೀಲ, ನಾಗಪ್ಪ ಶಿರೂರ, ರಾಮಣ್ಣ ಪಲ್ಲೇದ ಮುಂತಾದವರು ಉಪಸ್ಥಿತರಿದ್ದರು. ವೀರೇಶ ದೊಡ್ಡಣ್ಣವರ ನಿರೂಪಿಸಿದರು. ಅಶೋಕ ಕೊಳಿವಾಡ ವಂದಿಸಿದರು.