ದಾಬಸ್‍ಪೇಟೆ: ಶಿಕ್ಷಕರ ಪ್ರತಿಭೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ದಾರಿ ತೋರಬೇಕು. ವಿದ್ಯಾರ್ಥಿಗಳಂತೆಯೇ ಶಿಕ್ಷಕರಿಗೂ ಸಹಪಠ್ಯ ಚಟುವಟಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗಿವೆ ಎಂದು ಸಂಪನ್ಮೂಲ ವ್ಯಕ್ತಿ ರೇಖಾ ಹೇಳಿದರು.

ದಾಬಸ್‍ಪೇಟೆ: ಶಿಕ್ಷಕರ ಪ್ರತಿಭೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ದಾರಿ ತೋರಬೇಕು. ವಿದ್ಯಾರ್ಥಿಗಳಂತೆಯೇ ಶಿಕ್ಷಕರಿಗೂ ಸಹಪಠ್ಯ ಚಟುವಟಿಕೆಗಳು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗಿವೆ ಎಂದು ಸಂಪನ್ಮೂಲ ವ್ಯಕ್ತಿ ರೇಖಾ ಹೇಳಿದರು.

ಪಟ್ಟಣದ ವಿದ್ಯಾಸ್ಪೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬೋಧನಾ ಕೌಶಲಗಳನ್ನು ಬಳಸಿಕೊಂಡು ಪಾಠ ಮಾಡಿದಾಗ ಮಾತ್ರ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುತ್ತದೆ. ಆಯಾ ವಿಷಯಕ್ಕೆ ತಕ್ಕಂತೆ ಪ್ರಯೋಗ, ಅಭಿನಯ, ಹಾಡುಗಳಿಂದ ಕಲಿಸಬೇಕು. ಶಿಕ್ಷಕರಿಗಾಗಿ ಆಯೋಜಿಸಿರುವ ಸ್ಪರ್ಧೆಗಳು ಅವರ ಜ್ಞಾನ ವಿಕಾಸದ ಜತೆಗೆ, ಮಕ್ಕಳಲ್ಲಿಯೂ ಉತ್ತಮ ಕಲಿಕೆ, ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ ಎಂದರು.

ಉಪನ್ಯಾಸಕಿ ನೂಜಾಥ್ ಪರ್ವಿನ್ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರಲ್ಲಿನ ಪ್ರತಿಭೆಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸುವ ಶಕ್ತಿಯನ್ನು ಮಕ್ಕಳಲ್ಲಿ ತುಂಬಲು ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಎಲ್ಲರಿಗೂ ಮುಕ್ತವಾಗಿ ದೊರೆಯಬೇಕು ಎಂದರು.

ಆಡಳಿತಾಧಿಕಾರಿ ರಾಮಚಂದ್ರ ಮಾತನಾಡಿ, ಪಠ್ಯ ಬೋಧನೆಯಲ್ಲಿ ತೊಡಗಿರುವ ಅನೇಕ ಶಿಕ್ಷಕರು ವಿಭಿನ್ನ ರೀತಿಯ ಕಲೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಸಹಪಠ್ಯ ಚಟುವಟಿಕೆಗಳು ಶಿಕ್ಷಣದ ಜ್ಞಾನ ಮತ್ತು ಗುಣಮಟ್ಟ ವೃದ್ಧಿಗೆ ಪೂರಕ. ವಿದ್ಯಾರ್ಥಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲ, ಜೀವನವಿಡೀ ಅವರ ಕಲಿಯುವಿಕೆಗೆ ಪ್ರೇರಣೆ ನೀಡಿ ಉತ್ತಮ ನಾಗರಿಕರಂತೆ ಪರಿಶುದ್ಧರಾಗಿ ಬೆಳೆಯಲು ದಾರಿದೀಪ ಆಗುವವರೇ ನಿಜವಾದ ಶಿಕ್ಷಕ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸೋಮಶೇಖರ್, ಪ್ರಾಂಶುಪಾಲ ದಿಲೀಪ್ ಕುಮಾರ್, ಸಂಯೋಜಕರಾದ ಅನಿಲ್ ಕುಮಾರ್, ವನಜಾಕ್ಷಿ, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಪೋಟೋ 1 : ದಾಬಸ್‍ಪೇಟೆಯ ವಿದ್ಯಾಸ್ಪೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿವಿಧ ಶಾಲೆಗಳ ಶಿಕ್ಷಕರು.