ಸಾರಾಂಶ
ಮೂಡಲಗಿ ಶೈಕ್ಷಣಿಕ ವಲಯದ ವ್ಯಾಪ್ತಿಯ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಕೂಡಲೇ ವಾಹನ ಚಾಲಕರ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಎಂದು ಬಿಇಒ ಅಜಿತ ಮನ್ನಿಕೇರಿ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಮೂಡಲಗಿ ಶೈಕ್ಷಣಿಕ ವಲಯದ ವ್ಯಾಪ್ತಿಯ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಕೂಡಲೇ ವಾಹನ ಚಾಲಕರ ಆರೋಗ್ಯ ತಪಾಸಣೆ ಮಾಡುವುದರ ಜೊತೆಗೆ ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಎಂದು ಬಿಇಒ ಅಜಿತ ಮನ್ನಿಕೇರಿ ಸಲಹೆ ನೀಡಿದರು.ಭಾನುವಾರ ಪಟ್ಟಣದ ಆರ್.ಡಿ.ಎಸ್. ಕಾಲೇಜು ಸಭಾಂಗಣದಲ್ಲಿ ಜರುಗಿದ ಖಾಸಗಿ ಶಾಲೆಗಳ ವಾಹನ ಚಾಲಕರ ಮತ್ತು ಸಿಬ್ಬಂದಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ನಡೆದ ಶಾಲಾ ವಾಹನ ಅಪಘಾತ ಹಿನ್ನೆಲೆ ವಾಹನ ಚಾಲಕರು ಮತ್ತು ಶಾಲಾ ಆಡಳಿತ ಮಂಡಳಿಯವರು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿಗೆ ಗಮನಹರಿಸಬೇಕು ಹಾಗೂ ಆಟೋ ಮತ್ತು ಮಿನಿ ವಾಹನ ಬಳಸುವುದು ಕಾನೂನು ಬಾಹಿರ. ಒಂದು ವೇಳೆ ಅಂತಹ ವಾಹನಗಳು ಕಂಡುಬಂದರೆ ಕೂಡಲೇ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಾಹನ ಚಾಲಕರು ವಾಹನ ಚಲಾಯಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಟೇಪ್ ರೆಕಾರ್ಡರ್, ಮೊಬೈಲ್ ಬಳಸುವುದು, ವಿದ್ಯುತ್ ಕಂಬಗಳ ಸಮೀಪ ಮತ್ತು ಕಾಲುವೆಯ ದಾರಿಯಲ್ಲಿ ವಾಹನ ಚಲಾಯಿಸಬಾರದು. ಕಡ್ಡಾಯವಾಗಿ ಶಾಲಾ ಆಡಳಿತ ಮಂಡಳಿಯವರು ಪಾಲಕರ ಕಡೆಯಿಂದ ವಾಹನದಲ್ಲಿ ತಮ್ಮ ಮಕ್ಕಳನ್ನು ಕಳಿಸುವ ಬಗ್ಗೆ ಅನುಮತಿ ಪತ್ರ ತೆಗೆದುಕೊಳ್ಳಲೇಬೇಕು. ಅನುಮತಿ ನೀಡದ ಮಕ್ಕಳನ್ನು ಯಾವುದೇ ಕಾರಣಕ್ಕೂ ವಾಹನದಲ್ಲಿ ಹತ್ತಿಸಿಕೊಳ್ಳಬಾರದು ಎಂದು ಸೂಚಿಸಿದರು.ಮೂಡಲಗಿ ಪಿಎಸ್‍ಐ ರಾಜು ಪೂಜೇರಿ ಹಾಗೂ ಕುಲಗೋಡ ಪಿಎಸ್‍ಐ ಆನಂದ್ ಬಿ. ಮಾತನಾಡಿ, 2012ರಲ್ಲಿ ಸರ್ಕಾರ ಆದೇಶಿಸಿದಂತೆ ಶಾಲಾ ಆಡಳಿತ ಮಂಡಳಿಯವರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ, ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ವಕೀಲರಾದ ಲಕ್ಷ್ಮಣ ಅಡಿಹುಡಿ, ಶಿಕ್ಷಣ ಸಂಯೋಜಕ ಆರ್.ವ್ಹಿ.ಯರಗಟ್ಟಿ, ಸಿಆರ್‍ಪಿ ಅಧಿಕಾರಿ ಸಮೀರ್ ದಬಾಡಿ ಹಾಗೂ ಖಾಸಗಿ ಶಾಲೆಗಳ ಮುಖ್ಯಶಿಕ್ಷಕರು, ವಾಹನ ಚಾಲಕರು ಸಿಬ್ಬಂದಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಇದ್ದರು.