ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಗೌರಿ ಹುಣ್ಣಿಮೆಯಂದು ನಂದವಾಡಗಿ ಶ್ರೀ ಮಠದಲ್ಲಿ ವಾರಗಳ ಕಾಲ ಪುರಾಣ, ಮಂಗಲೋತ್ಸವ, ಕುಂಭಮೇಳ ಮತ್ತು ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆದವು.ಬೆಳಗ್ಗೆ ಶ್ರೀಮಠದಲ್ಲಿ ಪೂಜ್ಯ ಗುರುದ್ವಯರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುರಾಣ ಮಹಾಮಂಗಲ ಪೂಜ್ಯರಿಂದ ಒಗಟುಗಳಿಗೆ ಅಯ್ಯಾಚಾರ ದೀಕ್ಷಾ ಸಂಸ್ಕಾರ, ನೂರಾರು ಕುಂಭಮೇಳ, ಹಿರಿಯ ಪೂಜ್ಯರ ಭಾವಚಿತ್ರ ಮೆರವಣಿಗೆ, ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಧರ್ಮಸಭೆ ಉದ್ದೇಶಿಸಿ ನಂದವಾಡಗಿ ಡಾ.ಅಭಿನವ ಚೆನ್ನಬಸವ ಶಿವಾಚಾರ್ಯರು ಆಶೀರ್ವಚಿಸಿ, ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಸದ್ಭಕ್ತರ ಪಾತ್ರ ಅಪಾರವಾಗಿದ್ದು, ಹೀಗೆ ಮುಂದುವರೆಯಲಿ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ನಾಡಿನಲ್ಲಿ ವೀರಶೈವ ಲಿಂಗಾಯತ ಮಠಗಳು ಧಾರ್ಮಿಕ ಪರಂಪರೆ ಮುನ್ನಡೆಸುವ ಜೊತೆಗೆ ಶಿಕ್ಷಣ ಮತ್ತು ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಮಠಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅಂತಹ ಮುಂಚೂಣಿಯಲ್ಲಿರುವ ಮಠ ನಮ್ಮ ಭಾಗದ ನಂದವಾಡಗಿ ಮಹಾಂತೇಶ್ವರ ಮಠ ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷ ಎಂದರು. ಅಲ್ಲದೆ ಸಭೆಗಳ ಮೂಲಕ ಜನರ ಕಲ್ಯಾಣ ಮಾಡುತ್ತಿರುವ ಅನೇಕ ಮಠಗಳಲ್ಲಿ ನಂದವಾಡಗಿ ಶ್ರೀಮಠ ಅಗ್ರಗಣ್ಯ ಎಂದರು.
ಶ್ರೀಮಠದ ಸದ್ಭಕ್ತರ ಮನದಾಳದ ಆಸೆಯನ್ನು ಶಾಸಕರು ತಿಳಿಸಿ, ಶ್ರೀಮಠದ ಜಾತ್ರಾ ಮಹೋತ್ಸವದ ಬರುವ ವರ್ಷ ಎಲ್ಲರೂ ಕೂಡಿ ಪೂಜ್ಯರ ಆಶೀರ್ವಾದದೊಂದಿಗೆ ನೂತನ ರಥ ನಿರ್ಮಾಣ ಮಾಡಿ, ರಥೋತ್ಸವ ಎಳೆಯೋಣ ಎಂದರು. ಹಿಗಾಗೀ ನಾವೆಲ್ಲರೂ ರಥೋತ್ಸವಕ್ಕೆ ಬೇಕಾಗುವ ಎಲ್ಲಾ ಸಹಾಯ, ಸಹಕಾರವನ್ನು ತನು-ಮನ-ಧನದಿಂದ ಮಾಡೋಣ ಎಂದರು. ಇದೇ ವೇಳೆ ಶಾಸಕರಿಗೆ ಶ್ರೀಮಠದಿಂದ ಸತ್ಕರಿಸಿಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಷಟಸ್ಥಲ ಬ್ರಹ್ಮ ತಪೋನಿದಿ ಮಹಾಂತಲಿಂಗ ಶಿವಾಚಾರ್ಯರು, ನಂದವಾಡಗಿ ಆಳಂದ ಜಾಲವಾದಿ, ಗುರುಬಸವ ಮಹಾಸ್ವಾಮೀಜಿ, ಘನಮಠೇಶ್ವರ ಸಂತೇಕೆಲೂರ, ಸಿದ್ದಲಿಂಗ ಮಹಾಸ್ವಾಮೀಜಿ ವಿರಕ್ತಮಠ ವಳಬಳ್ಳಾರಿ, ಷಟಸ್ಥಲ ಬ್ರಹ್ಮ ವರರುದ್ರಮನಿ ಶಿವಾಚಾರ್ಯರು ಗಚ್ಚಿನಮಠ ಮಸ್ಕಿ, ಶಾಂತಮಲ್ಲ ಮಹಾಸ್ವಾಮೀಜಿ ಅಡವಿ-ಅಮರೇಶ, ನಂದವಾಡಗಿ ಮತ್ತು ಹರಿಣಾಪುರ್ ಗ್ರಾಮಸ್ಥರು, ಸದ್ಭಕ್ತರು ಇದ್ದರು. ಬಸಯ್ಯ ಹಿರೇಮಠ್ ಹಾಗೂ ಪ್ರಭು ಹಿರೇಮಠ್ ನಿರೂಪಿಸಿ, ವಂದಿಸಿದರು.