ಸಾರಾಂಶ
ಗಜೇಂದ್ರಗಡ: ಬೀದಿ ಬದಿ ವ್ಯಾಪಾರಿಗಳಿಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರದಿಂದ ರೂಪಿಸಿರುವ ಯೋಜನೆಗಳ ಜಾಗೃತಿ ಜತೆಗೆ ಸಕಾಲದಲ್ಲಿ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುವೆ ಎಂದು ಪಟ್ಟಣ ಮಾರಾಟ ಸಮಿತಿ ಅಧ್ಯಕ್ಷ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಶನಿವಾರ ಪಟ್ಟಣ ಮಾರಾಟ ಸಮಿತಿಯಿಂದ ನಡೆದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಆರ್ಥಿಕ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿರುವ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಈಗಾಗಲೇ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ, ಗುರುತಿನ ಚೀಟಿ ಸೇರಿ ಇತರ ಕಾರ್ಯಕ್ರಮಗಳನ್ನು ತಿಳಿಸಲು ಜಾಗೃತಿ ಸಭೆಗಳ ಜತೆಗೆ ಸಕಾಲದಲ್ಲಿ ಯೋಜನೆಗಳ ಲಾಭವನ್ನು ದೊರಕಿಸಿಕೊಡಲು ಪುರಸಭೆ ಸದಾ ಸಿದ್ಧವಾಗಿದೆ. ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳ ಸರ್ವೇ ಕಾರ್ಯದ ಜತೆಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದ ಅವರು, ಪಟ್ಟಣದ ಕಾಲಕಾಲೇಶ್ವರ ವೃತ್ತ, ತಹಸೀಲ್ದಾರ್ ಕಚೇರಿ ಸುತ್ತಲಿನ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸುವುದು ಸಾರ್ವಜನಿಕ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಪರಿಣಾಮ ಅಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಬದುಕು ನಡೆಸಲು ಆಗುತ್ತಿರುವ ತೊಂದರೆ ಜತೆಗೆ ನೋವಿನ ಬಗ್ಗೆ ಗಮನದಲ್ಲಿದೆ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ಶಾಸಕರು ಹಾಗೂ ಜಿಲ್ಲಾ ಉಪವಿಭಾಗಾಧಿಕಾರಿಗಳ ಚರ್ಚಿಸಲಾಗಿದ್ದು ಸಮಸ್ಯೆಗೆ ಶೀಘ್ರದಲ್ಲೆ ಪರಿಹಾರ ಸಿಗುವ ಭರವಸೆಯಿದೆ. ಸ್ಥಳೀಯ ಬೀದಿ ಬದಿ ವ್ಯಾಪಾರಿಗಳಿಗೆ ಪುರಸಭೆಯಿಂದ ಮುಂದಿನ ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪುರಸಭೆ ಮಾರಾಟ ಸಮಿತಿ ಕಾರ್ಯದರ್ಶೀ ಬಿ. ಮಲ್ಲಿಕಾರ್ಜನ, ಪಟ್ಟಣದ ಮಾರಾಟ ಸಮಿತಿ ಸದಸ್ಯರಾದ ಬಾಷೇಸಾಬ ಕರ್ನಾಚಿ, ಚೌಡಮ್ಮ ಯಲ್ಪು, ಪಾರುಬಾಯಿ ರಾಠೋಡ, ಚಂದ್ರಶೇಖರ ರಾಠೋಡ, ಹುಲ್ಲಪ್ಪ ತಳವಾರ, ರಾಜೇಸಾಬ ಕಟ್ಟಿಮನಿ, ಯಮನೂಜಪ್ಪ ಮಾಂಡ್ರೆ, ಮಂಜುನಾಥ ವಡ್ಡರ ಹಾಗೂ ಉಮಾ ಚವ್ಹಾಣ, ಸುಖನ್ಯಾ ರಣದೇವ, ಕಳಕಪ್ಪ ಪೋತಾ ಸೇರಿ ಇತರರು ಇದ್ದರು.