ಬದುಕು ಸುಂದರವಾಗಬೇಕಾದರೆ ನೊಂದವರಿಗೆ ಸ್ಪಂದಿಸಿ

| Published : Jan 21 2024, 01:34 AM IST

ಸಾರಾಂಶ

ಅಲಂಕಾರಿಕ ಸಾಮಾಗ್ರಿ ಬಳಸಿ ಮುಖ ಸುಂದರವನ್ನಾಗಿಸುವುದು ಬಲು ಸುಲಭ. ಆದರೆ ಬದುಕು ಸುಂದರವಾಗಿರಬೇಕಾದರೆ ನೊಂದವರಿಗೆ ಸಹಾಯ ಮಾಡುವುದು ಅಗತ್ಯ.

ಚಿತ್ರದುರ್ಗ: ಅಲಂಕಾರಿಕ ಸಾಮಾಗ್ರಿ ಬಳಸಿ ಮುಖ ಸುಂದರವನ್ನಾಗಿಸುವುದು ಬಲು ಸುಲಭ. ಆದರೆ ಬದುಕು ಸುಂದರವಾಗಿರಬೇಕಾದರೆ ನೊಂದವರಿಗೆ ಸಹಾಯ ಮಾಡುವುದು ಅಗತ್ಯವೆಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು.

ಮುರುಘಾಮಠದ ಅನುಭವಮಂಟಪದಲ್ಲಿ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲಯದ 2022-23ನೇ ಸಾಲಿನ ಪದವೀಧರರಿಗೆ ಶನಿವಾರ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ನಾವು ಮಾಡುವ ಸಂಪಾದನೆ 4 ಜನರಿಗೆ ಉಪಯೋಗವಾಗಬೇಕು. ಓದಿ ಪಡೆದ ಪದವಿ ಒಂದಿಷ್ಟು ಜನಕ್ಕೆ ಉಪಯೋಗವಾಗಬೇಕು. ಆಗ ಪದವಿಗೆ ಸಾರ್ಥಕತೆ ದೊರೆಯುತ್ತದೆ. ಕವಿ ಸಿದ್ಧಯ್ಯ ಪುರಾಣಿಕರು ಏನಾದರೂ ಆಗು ಮೊದಲು ಮಾನವನಾಗು ಎಂದಿದ್ದು ಮಾನವೀಯತೆಯನ್ನು ಬೆಳಸಿಕೊಳ್ಳಬೇಕು ಎಂದರು.

ಜೀವನದಲ್ಲಿ ಸಂಪಾದನೆಯೊಂದೇ ಮುಖ್ಯವಾಗಬಾರದು. ಹೆಚ್ಚು ಹಣ ಸಂಪಾದನೆ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ದುರಾಸೆ ಅತಿ ಸಂಪಾದನೆಗೆ ಪ್ರಚೋದಿಸುತ್ತದೆ. ತಂದೆ-ತಾಯಿ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳು ಓದಿದ ಮೇಲೆ ಉನ್ನತ ಹುದ್ದೆಗೆ, ವಿದೇಶಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಆದರೆ ಎಲ್ಲಿಗೆ ಹೋದರೂ, ಯಾವುದೇ ಸ್ಥಾನಮಾನಗಳಿಸಿದರೂ ಕಲಿಸಿದ ಗುರುವನ್ನು, ಬೆಳಸಿದ ತಂದೆ-ತಾಯಿಯನ್ನು ಮರೆಯಬಾರದು. ಮಾನವೀಯತೆ ಬೆಳಸಿಕೊಂಡಲ್ಲಿ ಮಾನವ ಜನ್ಮ ಸಾರ್ಥಕವಾಗುತ್ತದೆ.

ಒಳ್ಳೆಯ ಸಂಸ್ಕಾರ ಕಲಿತು ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಶ್ರೇಷ್ಠ ವ್ಯಕ್ತಿಗಳಾಗಬೇಕು. ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಅಬ್ದುಲ್ ಕಲಾಂರನ್ನು ಇಡೀ ಜಗತ್ತೇ ಪ್ರೀತಿಸುತ್ತಿತ್ತು. 2016ರಲ್ಲಿ ಶ್ರೀಮಠದ ಕಾರ್ಯಕ್ರಮಕ್ಕೆ ಅಬ್ದುಲ್ ಕಲಾಂ ಆಗಮಿಸಿ ಸಂಸ್ಥೆಯ ವಿದ್ಯಾರ್ಥಿಗಳ ಕುರಿತು ಸ್ಫೂರ್ತಿಯ ಮಾತುಗಳನ್ನಾಡಿದ್ದರು. ಎಸ್‌ಜೆಎಂಐಟಿ ಕಾಲೇಜನ್ನು ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸ್ಥಾಪಿಸಿದರು. ಎಸ್.ಜೆಎಂ ತಾಂತ್ರಿಕ ಮಹಾವಿದ್ಯಾಲಯ ಕಳೆದ 43 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.

ಸುರತ್ಕಲ್ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮೋಹಿತ್ ಪಿ.ತಹಿಲಿಯಾನಿ ಮಾತನಾಡಿ, ಇದೇ ಕಾಲೇಜಿನಲ್ಲಿ 2007ರಲ್ಲಿ ಪದವಿ ಪಡೆದಿದ್ದು, ಇಂದು ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ವಿದ್ಯಾರ್ಥಿಗಳು 3 ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾವು ಯಾವುದೇ ಕೆಲಸ ಮಾಡಲಿ, ಯಾವುದೇ ಹುದ್ದೆ ಹೊಂದಲಿ ಅಥವಾ ವ್ಯಾಪಾರ ಉದ್ಯಮ ಮಾಡಲಿ ನಮ್ಮಲ್ಲಿ ಸ್ಥಿರತೆಯಿರಬೇಕು. ಸ್ಥಿರತೆ ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಅದೇ ರೀತಿ ವಿದ್ಯಾರ್ಥಿ ದೆಸೆಯಿಂದಲೇ ಸ್ಥಿರತೆ ಬೆಳಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ.ಭರತ್ ಮಾತನಾಡಿ, ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರಗಳಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿರುವುದು ಆಂತಂಕಕಾರಿ ಬೆಳವಣಿಗೆಯಾಗಿದೆ. ಮಾನವೀಯ ಮೌಲ್ಯಗಳನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ. ಮನುಷ್ಯ ಕೇವಲ ಹಣಗಳಿಕೆ ಹಿಂದೆ ಬಿದ್ದು ಏಕಾಂಗಿತನಗೊಳಕ್ಕಾಗುತ್ತಿದ್ದಾನೆ. ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಮಾನಸಿಕ ಅಸಮತೋಲನದಿಂದ ಸೋಲುತ್ತಿದ್ದೇವೆ. ಮಾನಸಿಕ ಸಮತೋಲನ ಹೊಂದಿದದಲ್ಲಿ ಸಮಸ್ಯೆಗಳನ್ನು ಹಿಮ್ಮೆಟ್ಟಿಸಬಹುದು. ನಮ್ಮ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಇಸ್ರೋದ ಚಂದ್ರಯಾನ-3ರ ಯೋಜನೆಯ ಯಶಸ್ವಿಯ ಭಾಗವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ವಿವಿಧ ಇಲಾಖಾ ಮುಖ್ಯಸ್ಥರುಗಳಾದ ಡಾ.ಜಗನ್ನಾಥ್.ಎನ್, ಡಾ.ಕುಮಾರಸ್ವಾಮಿ ಬಿ.ಜಿ, ಡಾ.ಸಿದ್ಧೇಶ್ ಕೆ.ಬಿ, ಪ್ರೊ.ಪೋರಾಳ್ ನಾಗರಾಜ್, ಡಾ.ಲೋಕೇಶ್ ಎಚ್.ಜೆ, ಅಕಾಡೆಮಿಕ್ ಡೀನ್ ಡಾ.ರಾಜೇಶ್ ಎ.ಎಂ, ಡಾ.ನಿರಂಜನ್ ಈ, ಪ್ರೊ.ಶಶಿಧರ್ ಎ.ಪಿ, ಡಾ.ಕುಮಾರಸ್ವಾಮಿ ಕೆ, ಸುನಿಲ್.ಜೆ.ಬಿ, ಕಾರ್ಯಕ್ರಮ ಸಂಚಾಲಕ ಪ್ರೊ.ಲವಕುಮಾರ್ ಟಿ.ಬಿ ಉಪಸ್ಥಿತರಿದ್ದರು.