ಸಾರಾಂಶ
ಚಳ್ಳಕೆರೆ: ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿ ಜ.22ರಂದು ಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಗಮನಸೆಳೆದಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣವಾಗಿದ್ದು, ಕೋಟ್ಯಾಂತರ ರಾಮಭಕ್ತರು ಕಾಯುತ್ತಿದ್ದಾರೆ ನಗರದ ವಿವಿಧೆಡೆ ಬಾಲರಾಮನ ಪ್ರತಿಷ್ಠಾಪನಾ ಹಿನ್ನೆಲೆಯಲ್ಲಿ ಹಲವಾರು ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವಿಎಚ್‌ಪಿ ತಾಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ ತಿಳಿಸಿದ್ದಾರೆ.
ಶ್ರೀರಾಮಚಂದ್ರನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆ, ಕರಪತ್ರ ಹಾಗೂ ಶ್ರೀರಾಮನ ಭಾವಚಿತ್ರ ಭಕ್ತಿಶ್ರದ್ಧೆಯಿಂದ ನೂರಾರು ಹಿಂದೂಬಂಧುಗಳು ಮನೆ, ಮನೆಗೆ ತೆರಳಿ ವಿತರಣೆ ಮಾಡಿದ್ದಾರೆ. ಮಂತ್ರಾಕ್ಷತೆ ಪಡೆದವರು ಜ.22ರ ಪ್ರತಿಷ್ಠಾಪನಾ ಕಾರ್ಯಕ್ರಮದ ನಂತರ ಸದರಿ ಮಂತ್ರಾಕ್ಷತೆ ಪಾಯಸ, ಇತರೆ ಸಿಹಿಪದಾರ್ಥಗಳಿಗೆ ಬೆರೆಸಿ ಸೇವಿಸಬಹುದಾಗಿದೆ.ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಶ್ರೀರಾಮತಾರಕ ಹೋಮ, ವೇದಬ್ರಹ್ಮ ಪ್ರದೀಪ್ ಶರ್ಮ ಮತ್ತು ತಂಡದಿಂದ ಪ್ರಾರಂಭವಾಗಲಿದ್ದು, ಪ್ರತಿಷ್ಠಾಪನೆಯ ನಂತರ ನರಹರಿ ಸದ್ಗುರು ಆಶ್ರಮದ ವೈ.ರಾಜರಾಮ್ ಅವರು ಅಯೋಧ್ಯೆಯ ಶ್ರೀರಾಮಮಂದಿರ ವೈಶಿಷ್ಟಗಳ ಬಗ್ಗೆ ಉಪನ್ಯಾಸ ನೀಡುವರು.
ಹಳೇಟೌನ್‌ನ ಶ್ರೀರಾಮಮಂದಿರದಲ್ಲೂ ಸಹ ಪೂಜಾ ಕಾರ್ಯಕ್ರಮಗಳನ್ನು ಆರ್ಚಕ ಎ.ಶಿವಕುಮಾರ ಶರ್ಮ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಯಕನಹಟ್ಟಿ ರಸ್ತೆಯ ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ಶ್ರೀರಾಮ ತಾರಕಹೋಮ ಹಾಗೂ ಇನ್ನಿತರಪೂಜಾ ಕಾರ್ಯಕ್ರಮಗಳನ್ನು ವೇದಬ್ರಹ್ಮ ನಾಗಶಯನ ಗೌತಮ್ ಮತ್ತು ತಂಡದೊಂದಿಗೆ ಹಮ್ಮಿಕೊಳ್ಳಲಾಗಿದೆ. ಗಾಂಧಿ ನಗರದ ಸಾಯಿಬಾಬಾ ಮಂದಿರ, ವಿಠಲ ನಗರದ ಪಾಂಡುರಂಗ ದೇವಸ್ಥಾನ, ಬೆಂಗಳೂರು ರಸ್ತೆಯ ಶ್ರೀವಾಸವಿ ಮಹಲ್‌ನ ವಾಸವಾಂಬೆ ದೇವಸ್ಥಾನದಲ್ಲಿ ರಾಮತಾರಕಹೋಮ ಕಾರ್ಯಕ್ರಮಗಳು ನಡೆಯಲಿವೆ.ರಾಮಮಂದಿರದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮ ಕುರಿತು ನೆಹರೂ ವೃತ್ತ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ಯಶಸ್ವಿಗೆ ಶುಭಹಾರೈಸಿ ಶ್ರೀರಾಮಭಕ್ತರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿ ಶುಭಕೋರಿದ್ದಾರೆ. ಚಳ್ಳಕೆರೆ ನಗರದವೂ ಸೇರಿದಂತೆ ತಾಲ್ಲೂಕಿನಾದ್ಯಂತ ಈಗ ಎಲ್ಲೆಡೆ ಶ್ರೀರಾಮನ ನಾಮಸ್ಮರಣೆ ಹೆಚ್ಚಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ನಿರ್ಮಾಣವಾಗಲಿರುವ ಶ್ರೀಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ವಿಶ್ವದ ಗಮನ ಸೆಳೆದಿದೆ.