ರಮೇಶ್.ಕೆ.
ಕನ್ನಡಪ್ರಭ ವಾರ್ತೆ, ಬಂಗಾರಪೇಟೆ:ಶಾಲಾ ಮಕ್ಕಳ ಪಾಲಿನ ಪೌಷ್ಟಿಕಾಂಶ ಉದ್ದೇಶದ ಮೊಟ್ಟೆ, ಶಿಕ್ಷಕರ ಪಾಲಿಗೆ ಹೊರೆಯಾಗಿ ಪರಿಣಮಿಸಿದ್ದು, ಬೆಲೆ ಹೆಚ್ಚಳದ ವ್ಯತ್ಯಾಸ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಅಗತ್ಯ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಶಿಕ್ಷಕ ಸಮುದಾಯ, ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಅಡುಗೆ ಅನಿಲ ಬೆಲೆ ಗಗನಮುಖಿಯಾಗಿರುವುದು ಹಾಗೂ ಕೊರತೆಯ ನಡುವೆ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸಲೇಬೇಕಿರುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಇದರ ಜತೆಗೆ ಮೊಟ್ಟೆಯ ಬೆಲೆ ವ್ಯತ್ಯಾಸ ಸರಿದೂಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ.ಸರ್ಕಾರಿ ಶಾಲೆಗಳಲ್ಲಿ ಈಗ ಪ್ರತಿ ದಿನ ಶಿಕ್ಷಕರಿಗೆ ಮೊಟ್ಟೆಯದ್ದೇ ಚಿಂತೆ. ಪ್ರತಿ ಮೊಟ್ಟೆ ಬೆಲೆ 7 ರು. ದಾಟಿ ತಿಂಗಳೇ ಕಳೆದಿವೆ. ಆದರೆ, ಸರ್ಕಾರ ನಿಗದಿ ಮಾಡಿರುವುದು ಖರೀದಿಗೆ 5 ರು. ಮಾತ್ರ. ಉಳಿದ 2 ರು. ಗಳನ್ನು ಶಿಕ್ಷಕರೇ ಭರಿಸಬೇಕಿದೆ. ವಿದ್ಯಾರ್ಥಿಗಳು ಕಡಿಮೆ ಸಂಖ್ಯೆ ಇರುವ ಶಾಲೆಗಳಲ್ಲಿ ಶಿಕ್ಷಕರು ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ. ಆದರೆ, ಹೆಚ್ಚು ಮಕ್ಕಳಿರುವ ಶಾಲೆಗಳ ಮುಖ್ಯ ಶಿಕ್ಷಕರ ಪಾಡಂತೂ ಹೇಳತೀರದು. ಇದರ ಜತೆಗೆ ಮೊಟ್ಟೆ ವಿಚಾರದಲ್ಲಿ ಸರ್ಕಾರದ ಮಾನದಂಡ ಶಿಕ್ಷಕರನ್ನು ದೊಡ್ಡ ಇಕ್ಕಟ್ಟಿದೆ ಸಿಲುಕಿಸಿದೆ. ಪ್ರತಿ ಮೊಟ್ಟೆ ಇಂತಿಷ್ಟು ಗ್ರಾಂ ಇರಲೇಬೇಕು. ಖರೀದಿಗೂ ಮುನ್ನ ಮೊಟ್ಟೆಯನ್ನು ನೀರಿನಲ್ಲಿ ಹಾಕಬೇಕು. ಮೊಟ್ಟೆ ತೇಲಿದರೆ ಅದು ಮಕ್ಕಳಿಗೆ ಬಳಕೆಗೆ ಸೂಕ್ತವಲ್ಲ ಎಂದು ತಿರಸ್ಕಾರ ಮಾಡಬೇಕೆನ್ನುವ ನಿಯಮವೂ ಇದೆ. ಆದರೆ, ಪ್ರತಿ ದಿನ ಪ್ರತಿ ಮೊಟ್ಟೆಯ ತೂಕ ಮತ್ತು ಗುಣಮಟ್ಟ ಖರೀದಿಸಿ ತರಲು ಸಾಧ್ಯವೇ ಎನ್ನುವ ಪ್ರಶ್ನೆ ಶಿಕ್ಷಕ ಸಮುದಾಯದ್ದು. ಇದನ್ನು ವಿರೋಧಿಸಿದ ಶಿಕ್ಷಕರ ವಿರುದ್ಧ ಇಲಾಖೆ ಗರಂ ಆದ ಪ್ರಸಂಗವೂ ನಡೆದಿದೆ.
ಅಡುಗೆ ಎಣ್ಣೆದು ಮತ್ತೊಂದು ಕಥೆಮೊಟ್ಟೆ ಕಥೆ ಒಂದೆಡೆಯಾದರೆ ಅಡುಗೆ ಎಣ್ಣೆ ಬೆಲೆ ಸಹ ಏರಿಕೆಯಿಂದ ಇದೂ ಸಹ ಶಿಕ್ಷಕರಿಗೆ ತಲೆಬಿಸಿ ಮಾಡಿದೆ, ಸರ್ಕಾರದ ನಿಗದಿಪಡಿಸಿರುವ ದರ 160 ರು. ಆದರೆ ಮಾರುಕಟ್ಟೆಯಲ್ಲಿ 180 ರು. ದರವಿದೆ. ಅದೇ ರೀತಿ ತೊಗರಿ ಬೇಳೆಗೆ ಸರ್ಕಾರ ನೀಡುವ ದರ 103 ರು. ಆದರೆ ಮಾರುಕಟ್ಟೆಯಲ್ಲಿ 140 ರು. ಇದೆ. ಇನ್ನು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಯ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಮೊದಲು ವಾರದ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಅಜೀಂ ಪ್ರೇಂ ಜಿ ಫೌಂಡೇಷನ್ ವತಿಯಿಂದ ಉಳಿದ 4 ದಿನಗಳಿಗೂ ಇದು ವಿಸ್ತರಣೆ ಆಯಿತು. ಸರ್ಕಾರ ಪ್ರತಿ ಮೊಟ್ಟೆ ಖರೀದಿಗೆ 5 ರು. ಹಾಗೂ ಸಾಗಣಿಕೆ, ಬೇಯಿಸುವುದು ಮತ್ತು ಸಿಪ್ಪೆ ಬಿಡಿಸಿಕೊಡಲು ಕ್ರಮವಾಗಿ 20 ಪೈಸೆ, 50 ಪೈಸೆ ಮತ್ತು 30 ಪೈಸೆ ನಿಗದಿಪಡಿಸಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 7ರಿಂದ 7.50 ರು. ವರೆಗೂ ಇದೆ. ಹೀಗಿರುವಾಗ ಬಿಸಿಯೂಟ ಯೋಜನೆಯನ್ನು ಶಾಲೆಗಳಲ್ಲಿ ಹೇಗೆ ತಾನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ? ಅಲ್ಲದೆ ಹೆಚ್ಚುವರಿ ಹಣ ಶಿಕ್ಷಕರಿಗೆ ಆರ್ಥಿಕ ಹೊರೆಯನ್ನು ಉಂಟು ಮಾಡಿರುವುದರಿಂದ ಹಾಗೂ ಕಳೆದ ವರ್ಷದ ಹೆಚ್ಚುವರಿ ಹಣದ ಬಾಕಿಯನ್ನು ಸರ್ಕಾರ ಇದುವೆರಗೂ ಪಾವತಿ ಮಾಡಿಲ್ಲ ಮತ್ತೆ ನಾವು ಯಾಕೆ ಆರ್ಥಿಕ ಹೊರೆಯನ್ನು ಹೊರಬೇಕೆಂದು ಗಡಿ ಭಾಗದ ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡದೆ ಬಾಳೆ ಹಣ್ಣು ವಿತರಿಸಿ ಸಮ್ಮನಾಗಿದ್ದಾರೆ.
ಕೋಟ್...ಸಾಮಾನ್ಯವಾಗಿ ಶಾಲೆಗಳಿಗೆ ಸರ್ಕಾರವೇ ಟೆಂಡರ್ ಮೂಲಕ ಎಣ್ಣೆ, ಬೇಳೆಯನ್ನು ಸರಬರಾಜು ಮಾಡುತ್ತದೆ. ಆದರೆ, ಈ ಶೈಕ್ಷಣಿಕ ಸಾಲಿನಲ್ಲಿ ಇನ್ನೂ ಎಣ್ಣೆ, ಬೇಳೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದ ಶಾಲೆಗಳಲ್ಲಿ ಶಿಕ್ಷಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುವುದು ನಮ್ಮ ಧರ್ಮ. ಆದರೆ, ನಿರಂತರವಾಗಿ ಬೆಲೆ ಏರಿಕೆ ಆಗುತ್ತಿರುವ ಕಾರಣ ಈ ಯೋಜನೆಯನ್ನು ಸಮರ್ಪಕವಾಗಿ ನಡೆಸುವುದು ದಿನದಿಂದ ದಿನಕ್ಕೆ ಸವಾಲಾಗುತ್ತಿದೆ.
-ಹೆಸರೆಳಲಿಚ್ಛಿಸದ ಶಿಕ್ಷಕ.-------ಮೊಟ್ಟೆ ಬೆಲೆ ಏರಿಳಿತ ನಿಜಕ್ಕೂ ಶಿಕ್ಷಕರ ಪಾಲಿಗೆ ಬಿಸಿತುಪ್ಪವಾಗಿದೆ. ಪಾಠ ಮಾಡುವ ಜೊತೆಗೆ ಮೊಟ್ಟೆ ಖರೀದಿಸಿ ಕೊಡುವುದು ದುರಾದೃಷ್ಟ. ಸರ್ಕಾರ ಪ್ರತಿ ತಿಂಗಳು ಜಿಪಂ ಮೂಲಕವೇ ಪ್ರತಿ ದಿನದ ಬೆಲೆ ಆದರಿಸಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಬೇಕು.
-ಸೂಲಿಕುಂಟೆ ಆನಂದ್. ಪ್ರಗತಿ ಪರ ಹೋರಾಟಗಾರ.