ಸಾರಾಂಶ
ಪ್ರವೀಣ್ ಘೋರ್ಪಡೆ
ಕನ್ನಡಪ್ರಭ ವಾರ್ತೆ ತಾಳಿಕೋಟೆಬಡವರ ಆರೋಗ್ಯ ಕಾಳಜಿ ಮಾಡಬೇಕಾದ ಆರೋಗ್ಯ ಕೇಂದ್ರವೇ ಇದೀಗ ಅನಾರೋಗ್ಯಕ್ಕೆ ಒಳಗಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.ತಾಲೂಕಿನಲ್ಲಿ ಮಾದರಿಯ ಆಸ್ಪತ್ರೆಯಾಗಿ ಈ ಹಿಂದೆ ಕಂಗೊಳಿಸುತ್ತಿದ್ದ ಭಂಟನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವೇ ಅನಾರೋಗ್ಯಕ್ಕೆ ಒಳಗಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯರಿಲ್ಲದೇ ಬಳಲುತ್ತಿದೆ.ಈ ಹಿಂದೆ ಸರ್ಕಾರದ ಆಧೀನದಲ್ಲಿದ್ದಾಗ ಈ ಆರೋಗ್ಯ ಕೇಂದ್ರ ನಿತ್ಯ ನೂರಾರು ರೋಗಿಗಳ ಪಾಲಿಗೆ ಸಂಜೀವಿನಿಯಾಗಿತ್ತು. ಅಲ್ಲದೇ, ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿತ್ತು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಸಿಂದಗಿಯ ಕಸ್ತೂರಿಬಾಯಿ ಈರಪ್ಪ ಲೋಣಿ ಮೇಮೋರಿಯಲ್ ಇನ್ನೋವೆಟಿವ್ ರಿಸರ್ಚ್ ಡೆವಲಪಮೆಂಟ್ ಮತ್ತು ಚಾರಿಟೇಬಲ್ ಟ್ರಸ್ಟ್‌ಗೆ ನಿರ್ವಹಣೆಯ ಗುತ್ತಿಗೆ ವಹಿಸಲಾಗಿದೆ. ಅಂದಿನಿಂದ ವರ್ಷದಿಂದ ವರ್ಷಕ್ಕೆ ಮಾದರಿ ಆಸ್ಪತ್ರೆ ಕಳೆಗುಂದುತ್ತಿದ್ದು, ಇದೀಗ ರೋಗಗ್ರಸ್ತವಾಗಿರುವುದು ವಿಪರ್ಯಾಸ.ಸೌಲಭ್ಯಗಳ ವಂಚಿತ ತಾಣ:
ಸರ್ಕಾರದ ಅಧೀನದಲ್ಲಿದ್ದಾಗ ೬ ಕಾಟ್ ಮತ್ತು ಬೆಡ್ ಮತ್ತು ಹಾಸಿಗೆ ವ್ಯವಸ್ಥೆಗಳಿದ್ದವು. ಸದ್ಯ ೫ ಕಾಟಾಗಳಿದ್ದು, ಬೆಡ್ ಹಾಸಿಗೆಗಳಿಲ್ಲ. ಆಸ್ಪತ್ರೆಯಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ. ರೂಮ್‌ಗಳಲ್ಲಿ ಅಳವಡಿಸಿದ್ದ ಫ್ಯಾನ್‌ಗಳು ಗುಜರಿಗೆ ತಲುಪಿದ್ದು, ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ.ನೀರು ಇಲ್ಲ, ಔಷಧಿಯೂ ಇಲ್ಲ
ಆಸ್ಪತ್ರೆಯ ಸುತ್ತಲಿನ ಆವರಣ ಕಸದ ರಾಶಿಯಂತಾಗಿದ್ದು, ಆವರಣದಲ್ಲಿರುವ ಗಿಡಗಳಿಗೆ ಎಮ್ಮೆ, ಕುರಿಗಳು ಸೇರಿದಂತೆ ಸಾಕು ಪ್ರಾಣಿಗಳ ಆವಾಸ ತಾಣವಾಗಿದೆ. ಯೋಗಾಭ್ಯಾಸ ಮಾಡಲು ನಿರ್ಮಿಸಲಾದ ಶೆಡ್ ಕೂಡಾ ಸೂಕ್ತ ನಿರ್ವಹಣೆಯೇ ಇಲ್ಲ. ಆರೋಗ್ಯ ಕ್ಷೇಮ ಕಟ್ಟಡದ ಬಾಗಿಲು ತೆರೆಯುವ ಭಾಗ್ಯ ಇನ್ನೂ ಕೂಡಿಬಂದಂತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಸಿಬ್ಬಂದಿ ಹಾಗೂ ರೋಗಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಬೇಕಾಗಿದೆ. ದುಡ್ಡು ಕೊಟ್ಟೇ ನೀರು ತಂದು ಕುಡಿಯಬೇಕಾಗಿದ್ದು, ಶೌಚಾಲಯಗಳಿದ್ದರೂ ನೀರಿಲ್ಲದಕ್ಕೆ ಬೀಗ ಜಡಿಯಲಾಗಿದೆ. ಸಲಾಯಿನ್ ಹಚ್ಚಬೇಕೆಂದರೇ ಹೊರಗಡೆಯಿಂದ ತರಬೇಕು. ಔಷಧಿಗಳ ಕೊರತೆಯಿಂದ ಆರೋಗ್ಯ ಕೇಂದ್ರ ಇದ್ದು ಇಲ್ಲದಂತಾಗಿದೆ.ಬಾಕ್ಸ್...ಎರಡು ವರ್ಷಗಳಿಂದ ವೇತನವಿಲ್ಲ!
ಈ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ೧೬ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಎನ್‌ಜಿಒಗೆ ವಹಿಸಿದಾಗಿನಿಂದ ವೈದ್ಯ ಸಿಬ್ಬಂದಿ ಸೇರಿ ಕೇವಲ ಓರ್ವ ವೈದ್ಯರು ೮ ಜನ ಸಿಬ್ಬಂದಿಯರಿದ್ದಾರೆ. ಬೆಳಗ್ಗೆ ಬಂದು ಹೋದ ಸಿಬ್ಬಂದಿ ಮತ್ತೆ ಮರುದಿನವೇ ಬರುವುದು ಸಾಮಾನ್ಯವಾಗಿದ್ದು, ಬೇರೆ ಡ್ಯೂಟಿಗೆ ಹಾಕಿದ್ದಾರೆನ್ನುವ ಸಬೂಬು ಮಾತ್ರ ಕೇಳಿದವರಿಗೆ ಸಿದ್ಧ ಉತ್ತರ ಫಿಕ್ಸ್. ಕಳೆದ ೨ ವರ್ಷಗಳಿಂದ ವೇತನವೇ ನೀಡದಿರುವುದೇ ಇದೆಲ್ಲಕ್ಕೆ ಕಾರಣ. ವೇಳೆಗೆ ಸರಿಯಾಗಿ ವೇತನ ನೀಡದೇ ಇರುವುದಕ್ಕೆ ಕೆಲವರು ಕೆಲಸ ಬಿಟ್ಟು ಹೋಗಿದ್ದರೇ ಇನ್ನೂ ಕೆಲವರು ಕಾಲಕಳೆಯುತ್ತಿದ್ದಾರೆ. ಈಗ ಮತ್ತೆ ೬ ತಿಂಗಳಿಂದ ಹೊಸ ವೈದ್ಯರನ್ನು ನೇಮಿಸಿದ್ದರೂ ವೇತನ ಮಾತ್ರ ಇಲ್ಲಿಯವರೆಗೆ ನೀಡಿಲ್ಲ ಎನ್ನುವ ಆರೋಪಕ್ಕೆ ಅಧಿಕಾರಿಗಳೇ ತಿಳಿಸಬೇಕು.ಎನ್‌ಜಿಒ ಅಧಿಕಾರಿಗಳ ಬೇಜವಾಬ್ದಾರಿಯಿಂದ ನರಳುತ್ತಿರುವ ಭಂಟನೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇನ್ನಾದರೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಚಿಕಿತ್ಸೆ ನೀಡಿ ಸಾರ್ವಜನಿಕರ ಬಳಕೆ ಬರುವಂತೆ ಮಾಡಬೇಕು....ಕೋಟ್
ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆ ಎನ್‌ಜಿಒ ಅಧಿಕಾರಿಗಳಿಂದ ಬೇಜವಾಬ್ದಾರಿಯಿಂದ ಆಸ್ಪತ್ರೆಯಲ್ಲಿಯ ಎಲ್ಲ ಮೂಲಭೂತ ಸೌಲಭ್ಯಗಳು ಕಳೆದು ಹೋಗಿವೆ. ಇಲ್ಲಿ ಕಾರ್ಯನಿರ್ವಹಿಸುವ ವೈದ್ಯ ಸಿಬ್ಬಂದಿಗೆ ೨ ವರ್ಷಗಳಿಂದ ವೇತನವನ್ನೇ ನೀಡಿಲ್ಲ. ಔಷಧಿಗಳ ಪೂರೈಕೆಯಿಲ್ಲದೇ ಭಂಟನೂರ ಉತ್ತಮ ಆಸ್ಪತ್ರೆ ಬಡ ರೋಗಿಗಳಿಗೆ ಇದ್ದು ಇಲ್ಲದಂತಾಗಿದೆ.-ಮಂಜುನಾಥ ಗೋನಾಳ, ಗ್ರಾಮಸ್ಥ.ಭಂಟನೂರ ಆಸ್ಪತ್ರೆಯು ಮೊದಲಿನಿಂದಲೂ ಎನ್‌ಜಿಒ ಮೂಲಕ ನಡೆಯುತ್ತಿದೆ. ಅಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ರೀತಿಯ ವರದಿಯನ್ನು ತಾಲೂಕು ಆರೋಗ್ಯ ಅಧಿಕಾರಿಗಳಿಂದ ತರಿಸಿಕೊಂಡು ಸೂಕ್ತಕ್ರಮ ಕೈಗೊಳ್ಳುತ್ತೇನೆ. ಸಾಧ್ಯವಾದರೆ ನಾನೇ ಭೇಟಿ ನೀಡಿ ಪರಿಶೀಲಿಸುತ್ತೇನೆ.
-ಡಾ.ಸಂಪತ್ತಕುಮಾರ ಗುಣಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.ಎನ್‌ಜಿಒದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದಿರುವ ಕುರಿತು ದೂರುಗಳು ಸಾಕಷ್ಟು ಬಂದಿವೆ. ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಎನ್‌ಜಿಒ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳುತ್ತೇನೆ.ಡಾ.ಸತೀಶ ತಿವಾರಿ, ತಾಲೂಕು ಆರೋಗ್ಯಾಧಿಕಾರಿ.