ಎಳನೀರು, ಬಾಂಜಾರುಮಲೆಗೆ ‘ಅನನ್ಯ ಮತಗಟ್ಟೆ’ ಭಾಗ್ಯ

| Published : Apr 19 2024, 01:10 AM IST

ಎಳನೀರು, ಬಾಂಜಾರುಮಲೆಗೆ ‘ಅನನ್ಯ ಮತಗಟ್ಟೆ’ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲಭೂತ ಸೌಲಭ್ಯ ವಚಿಂತವಾಗಿರುವ ಈ ಮತಗಟ್ಟೆಗಳು ದುರ್ಗಮ ಪ್ರದೇಶದಲ್ಲಿದ್ದು, ಅತಿ ಹೆಚ್ಚು ಮತದಾನ ನಡೆಯುವ ಮತಗಟ್ಟೆಗಳಾಗಿವೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ 241 ಮತಗಟ್ಟೆಗಳ ಪೈಕಿ ಎರಡು ಮತಗಳು ದೂರದ ಪ್ರದೇಶದಲ್ಲಿದ್ದು ಕನಿಷ್ಠ ವ್ಯವಸ್ಥೆಗಳನ್ನು ಹೊಂದಿಲ್ಲ. ಆದರೂ ಈ ಮತಗಟ್ಟೆಗಳನ್ನು ಅತಿ ಹೆಚ್ಚು ಮತದಾನ ನಡೆಯುವ ದೃಷ್ಟಿಯಿಂದ ಅನನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ತಾಲೂಕಿನ ಎಳನೀರು ಹಾಗೂ ಬಾಂಜಾರುಮಲೆ ಮತಗಟ್ಟೆಗಳಿಗೆ ಈ ಬಾರಿ ಅನನ್ಯ ಮತಗಟ್ಟೆ ಭಾಗ್ಯ ದೊರಕಿದೆ. ಎಳನೀರು ಮತಗಟ್ಟೆ: ಮಲವಂತಿಗೆ ಗ್ರಾಮದ ಎಳನೀರು ಮತಗಟ್ಟೆಗೆ ತೆರಳಬೇಕಾದರೆ 125 ಕಿ.ಮೀ. ಕ್ರಮಿಸಬೇಕು ದಿಡುಪೆ ಮೂಲಕ ಹೋದರೆ 30 ಕಿ.ಮೀ. ದೂರದಲ್ಲಿರುವ ಈ ಮತಗಟ್ಟೆಗೆ ಈ ಭಾಗದಿಂದ ಸರಿಯಾದ ರಸ್ತೆ ಇಲ್ಲದ ಕಾರಣ ಬಜಗೋಳಿ ಮೂಲಕ ಕ್ರಮಿಸಬೇಕು. ಚಿಕ್ಕಮಗಳೂರು ಜಿಲ್ಲೆಗೆ ಅತ್ಯಂತ ಸಮೀಪದಲ್ಲಿರುವ ಈ ಮತಗಟ್ಟೆಯಲ್ಲಿ ಈ ಬಾರಿ 473 ಮಂದಿ ಮತದಾರರಿದ್ದಾರೆ. ಎಳನೀರು ಅಂಗನವಾಡಿ ಕೇಂದ್ರ ಮತಗಟ್ಟ ಸಂಖ್ಯೆ 15ರ ಇಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ 459 ಮತದಾರರ ಪೈಕಿ 381 ಮಂದಿ ಮತ ಚಲಾಯಿಸಿ ಶೇ. 83.01 ಮತದಾನ ನಡೆದಿತ್ತು.

ಬಾಂಜಾರು ಮಲೆ: ನೆರಿಯ ಗ್ರಾಮದ ಅತ್ಯಂತ ದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಗೆ ತಾಲೂಕು ಕೇಂದ್ರದಿಂದ 45 ಕಿಮೀ. ದೂರ. ಚಾರ್ಮಾಡಿ ಘಾಟಿ ಮೂಲಕ ಸಂಚರಿಸಿ 9ನೇ ತಿರುವಿನ ಸಮೀಪ ಬಲಕ್ಕೆ ತಿರುಗಿ ಅಲ್ಲಿಂದ 7 ಕಿ.ಮೀ. ಕ್ರಮಿಸಿ ಸಮುದಾಯ ಭವನದಲ್ಲಿನ ಮತಗಟ್ಟೆ ತಲುಪಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ 106 ಮತದಾರರಿದ್ದು ಓರ್ವ ಮಾತ್ರ ಮತ ಚಲಾಯಿಸದ ಕಾರಣ 99.06 ಪ್ರಮಾಣದ ಮತದಾನ ದಾಖಲಾಗಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿತ್ತು. ಈ ಬಾರಿ ಇಲ್ಲಿ111 ಮತದಾರರಿದ್ದಾರೆ.

ಹಲವು ಸಮಸ್ಯೆ: ಈ ಎರಡು ಮತಗಟ್ಟೆಗಳ ಆಸು ಪಾಸು ಸಾಕಷ್ಟು ಮೂಲಭೂತ ಸೌಕರ್ಯಗಳ ಕೊರತೆ ಇದೆ.ಸುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಕಾಟವು ಇದೆ.ಅಲ್ಲದೆ ಈ ಕಾರಣದಿಂದ ಇಲ್ಲಿ ಯಾವುದೇ ಸಮಸ್ಯೆ ಕಂಡು ಬಂದರು ಅದಕ್ಕೆ ತಕ್ಷಣ ಪರಿಹಾರ ಸಿಗುವುದು ಅಸಾಧ್ಯ. ಹಾಗೂ ಇಲ್ಲಿಗೆ ತಲುಪಬೇಕಾದರೆ ಹಲವು ತಾಸು ಪ್ರಯಾಣವನ್ನು ಮಾಡಬೇಕು.

ಚಾರ್ಮಾಡಿ ಮತಗಟ್ಟೆಯಲ್ಲಿ ಗದ್ದಲ: ಕಳೆದ ವಿಧಾನಸಭಾ ಚುನಾವಣೆ ವೇಳೆ ಚಾರ್ಮಾಡಿ ಮತಗಟ್ಟೆಯಲ್ಲಿ ಭಾರಿ ಗದ್ದಲ ಕಂಡುಬಂದಿತ್ತು. ಮತದಾನ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತಿದೆ ಎಂದು ಆರಂಭದಿಂದಲೇ ಗೊಂದಲ ಏರ್ಪಟ್ಟು ತಡವಾಗಿ ಮತದಾನ ಮುಗಿದು, ಮತ ಪೆಟ್ಟಿಗೆ ಹೊತ್ತ ವಾಹನವನ್ನು ಸ್ಥಳೀಯ ಕೆಲವರು ತಡೆಗಟ್ಟಿದ ಘಟನೆಯೂ ನಡೆದಿತ್ತು. ಹಲವು ಅನಗತ್ಯ ಚಟುವಟಿಕೆಗಳು ನಡೆದು ಪೊಲೀಸರಿಂದ ಲಘು ಲಾಠಿ ಪ್ರಹಾರವು ನಡೆದಿತ್ತು. ಮಧ್ಯರಾತ್ರಿಯ ಬಳಿಕವಷ್ಟೇ ಪರಿಸ್ಥಿತಿ ಹತೋಟಿಗೆ ಬಂದಿತ್ತು.

ಬಾಂಜಾರು ಮಲೆ ಮತಗಟ್ಟೆಗೆ ಸಿಇಒ ಡಾ.ಆನಂದ್ ಭೇಟಿ: ಬಾಂಜಾರು ಮಲೆ ಸಮುದಾಯ ಭವನ ಮತಗಟ್ಟೆ 86 ಕ್ಕೆ ದ.ಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಆನಂದ್ ಕೆ. ಬುಧವಾರ ಭೇಟಿ ನೀಡಿ ಶೇ.100 ಮತದಾನಕ್ಕಾಗಿ ಮತದಾರರೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಲೋಕೇಶ್, ಬೆಳ್ತಂಗಡಿ ತಾ.ಪಂ ಇಒ ಮತ್ತು ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ವೈಜಣ್ಣ, ಸಹಾಯಕ ಚುನಾವಣಾಧಿಕಾರಿ ಕೆಂಪೇಗೌಡ, ದ.ಕ. ಸ್ವೀಪ್ ಸಮಿತಿ ಎಸ್.ಎಲ್. ಎಂಟಿ ಪ್ರಮೀಳಾ ರಾವ್, ಜಿಲ್ಲಾ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ತೇಜಾಕ್ಷಿ, ಸದಸ್ಯರಾದ ಡೊಂಬಯ್ಯ ಇಡ್ಕಿದು, ತಾ.ಪಂ. ವ್ಯವಸ್ಥಾಪಕ ಪ್ರಶಾಂತ್ ಡಿ., ಜಿಲ್ಲಾ ಸ್ವೀಪ್ ಸಮಿತಿಯ ಡಿಎಲ್ ಎಂಟಿ ಯೋಗೇಶ ಎಚ್.ಆರ್., ನೆರಿಯ ಗ್ರಾ.ಪಂ. ಪಿಡಿಒ ಸುಮಾ, ಬಿಎಲ್ ಒ ಮಧುಮಾಲಾ ಮತ್ತು ಬಾಂಜಾರು ಮಲೆಯ ಬಹುತೇಕ ಮತದಾರರು ಉಪಸ್ಥಿತರಿದ್ದರು.

ಎಳನೀರು ಮತಗಟ್ಟೆಯ ವ್ಯಾಪ್ತಿಯಲ್ಲಿ ತಾಪಂ ಇಒ ನೇತೃತ್ವದಲ್ಲಿ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮ ನಡೆದಿದೆ.

ಬಾಂಜಾರು ಮಲೆಯ ಮತದಾರರೆಲ್ಲರೂ ಒಂದೇ ಕಡೆ ಸೇರಿಸಿ, ಅವರಿರುವ ಸ್ಥಳಕ್ಕೆ ಹೋಗಿ ಅವರನ್ನು ಭೇಟಿ ಮಾಡಿ ಈ ಬಾರಿ ಶೇ.100 ಮತದಾನ ಮಾಡಿ ದಾಖಲೆ ನಿರ್ಮಿಸಲು ಇಲ್ಲಿನ ಮತದಾರರು ಸಿದ್ಧರಾಗಬೇಕೆಂದು ಕರೆ ಕೊಟ್ಟಿದ್ದೇವೆ.ಅ ವರ ಸಮಸ್ಯೆಗಳನ್ನು ಆಲಿಸಿದ್ದೇವೆ. ಅವರೆಲ್ಲರೂ ಏ.26 ರ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಮೂಲಕ ಎಲ್ಲರೂ ಮತದಾನ ಮಾಡುವ ಭರವಸೆ ನೀಡಿದ್ದಾರೆ

- ಡಾ. ಆನಂದ್ ಕೆ., ಸಿಇಒ ಜಿಪಂ‌, ಹಾಗೂ ಅಧ್ಯಕ್ಷ, ಜಿಲ್ಲಾ ಸ್ವೀಪ್ ಸಮಿತಿ.ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಮ್ಮ ಆಹ್ವಾನವನ್ನು ಮನ್ನಿಸಿ ಬಾಂಜಾರು ಮಲೆ ಮತಗಟ್ಟೆಗೆ ಭೇಟಿ ಕೊಟ್ಟು ಮತದಾರರೊಂದಿಗೆ ಸಂವಾದ ನಡೆಸಿದರು. ಇದರಿಂದ ಈ ಬಾರಿ ಶೇ.100 ಮತದಾನ ಸಾಧಿಸುವ ಗುರಿ ತಲುಪಲು ಮತ್ತಷ್ಟು ಉತ್ಸಾಹ ತಂದಿದೆ

- ವೈಜಣ್ಣ, ತಾಪಂ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ