ರಾಮನಗರ: ಹೆಣ್ಣು ಶಕ್ತಿ ಮತ್ತು ಮಾತೃತ್ವದ ಸಂಕೇತ. ಸಮಾಜದ ಉನ್ನತಿಗೆ ಮಹಿಳಾ ಸಬಲೀಕರಣ ಅನಿವಾರ್ಯ, ಏಕೆಂದರೆ ಸಮಾನತೆ ಇರುವಲ್ಲಿ ಮಾತ್ರ ದೇಶ ಬಲಶಾಲಿ. ಮಹಿಳೆಯರನ್ನು ದೈವಿಕ ಮಾತೃರೂಪದಲ್ಲಿ ಗೌರವಿಸಬೇಕು ಮತ್ತು ಶಿಕ್ಷಣದ ಮೂಲಕ ಅವರನ್ನು ಸಶಕ್ತಗೊಳಿಸಬೇಕು ಎಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಹೇಳಿದರು.

ನಗರದ ಪಟೇಲ್ ಆಂಗ್ಲಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಮನಗರ ತಾಲೂಕು ನೇಗಿಲಯೋಗಿ ಮಹಿಳಾ ಘಟಕಕ್ಕೆ ಚಾಲನೆ ನೀಡಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗೌರವಿಸುವ ಮತ್ತು ಲಿಂಗ ಸಮಾನತೆಗಾಗಿ ಜಾಗೃತಿ ಮೂಡಿಸುವ ದಿನವಾಗಿದೆ. ಇದು ಮಹಿಳಾ ಹಕ್ಕುಗಳ ಹೋರಾಟವನ್ನು ನೆನಪಿಸುತ್ತಾ, ಸಮಾನ ಅವಕಾಶಗಳು, ಶಿಕ್ಷಣ ಮತ್ತು ಸಬಲೀಕರಣದ ಮೂಲಕ ಉತ್ತಮ ಭವಿಷ್ಯ ನಿರ್ಮಿಸಲು ನಮಗೆ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದರು.

ಎಲ್ಲಿ ಮಹಿಳೆಯರನ್ನು ಪೂಜಿಸಿ ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಮಹಿಳೆಯ ರಕ್ಷಣೆ, ಹಕ್ಕುಗಳು, ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೆ ನೇಗಿಲಯೋಗಿ ಮಹಿಳಾ ಘಟಕ ಮುಂದಾಗಬೇಕು, ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.

ನೇಗಿಲಯೋಗಿ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್ ಸಿ. ರಾಜು ಮಾತನಾಡಿ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಳೆದ ಐದು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮಹಿಳಾ ಘಟಕವನ್ನು ಅಸ್ತಿತ್ವಕ್ಕೆ ತಂದಿದ್ದು, ನಮ್ಮ ಟ್ರಸ್ಟ್ ಜೊತೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿ, ಸೇವೆಯನ್ನು ಮಾಡಲು ಮುಂದಾಗಿರುವ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿಗಳು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ, ಸನ್ಮಾನಿಸಿ ಗೌರವಿಸಿದರು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.


ಈ ವೇಳೆ ನೇಗಿಲಯೋಗಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ. ತಿಮ್ಮೇಗೌಡ, ರವಿಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ‌.ಸತೀಶ್, ನೇಗಿಲಯೋಗಿ ರಾಮನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಎಚ್.ಎಸ್. ಗೌರವಾಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ನಾಗಮಣಿ, ಪ್ರಧಾನ ಕಾರ್ಯದರ್ಶಿ ಸಾಕಮ್ಮ, ಖಜಾಂಚಿ ಜಗದಾಂಬ, ಸಹ ಕಾರ್ಯದರ್ಶಿ ಕೆ.ಎಸ್.ಶಶಿಕಲಾ , ಪದಾಧಿಕಾರಿಗಳಾದ ವಿನೋದಮ್ಮ, ಯೋಗಿತಾ, ಡಾ. ಉಮಾ, ವಕೀಲರಾದ ಲಕ್ಷ್ಮಮ್ಮ, ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಪಟೇಲ್ ಆಂಗ್ಲಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಮನಗರ ತಾಲೂಕು ನೇಗಿಲಯೋಗಿ ಮಹಿಳಾ ಘಟಕದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.