ಕನ್ನಡಪ್ರಭ ವಾರ್ತೆ ತುರುವೇಕೆರೆ
ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿದರೆ ಅದು ಜನರು ಮತ್ತು ರೈತರ ಪಾಲಿಗೆ ಮರಣ ಶಾಸನವಿದ್ದಂತೆ ಎಂದು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಬೆಸ್ಕಾಂ ಕಚೇರಿ ಮತ್ತು ತಾಲೂಕು ಕಚೇರಿ ಎದುರು ವಿದ್ಯುತ್ ಖಾಸಗೀಕರಣಗೊಳಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಣಯದ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳ ಎಸ್ಕಾಂಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಇವೆಲ್ಲವೂ ಲಾಭದಾಯಕವಾದ ಪ್ರದೇಶವಾಗಿವೆ. ಹಾಗಾಗಿ ಟಾಟಾ ಪವರ್ ಕಂಪನಿ ಈ ಪ್ರದೇಶಗಳಲ್ಲಿ ಲಾಭ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿದರು.
ಕಳೆದ ಏಳೆಂಟು ದಶಕಗಳಿಂದ ಕೆಇಬಿ ರಾಜ್ಯದ ಜನರಿಗೆ ಇದ್ದುದರಲ್ಲಿ ಉತ್ತಮ ಸೇವೆ ನೀಡುತ್ತಿದೆ. ಈಗ ಖಾಸಗೀಕರಣಗೊಳಿಸಿದರೆ ಜನರ ಜೀವನ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಲಾಭಾಂಶ ಬರುವ ಕೈಗಾರಿಕೆಗಳು ಮತ್ತು ವಾಣಿಜ್ಯ ವಲಯಕ್ಕೆ ಮಾತ್ರ ಅದು ಒತ್ತು ನೀಡಲಿದೆ. ಈಗ ಸರ್ಕಾರ ಜಾರಿಗೆ ತಂದಿರುವ ಕೃಷಿಗೆ ಉಚಿತ ವಿದ್ಯುತ್, ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಇನ್ನಿತರ ಜನಸಾಮಾನ್ಯರು ಉಪಯೋಗಿಸುತ್ತಿರುವ ಯೋಜನೆಗಳು ಬಂದ್ ಆಗಲಿವೆ. ಅಲ್ಲದೇ ಸದ್ಯ ಕೆಇಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಕುಟುಂಬದ ಸದಸ್ಯರಿಗೂ ಗೇಟ್ ಪಾಸ್ ನೀಡಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಹಲವಾರು ದಶಕಗಳಿಂದ ಕೆಇಬಿ ಲಕ್ಷಾಂತರ ಕೋಟಿ ಹಣ ವಿನಿಯೋಗಿಸಿ ವಿತರಣಾ ಜಾಲ, ಉಪಕೇಂದ್ರಗಳು, ಯಂತ್ರೋಪಕರಣಗಳು ಸೇರಿ ಕೋಟ್ಯಾಂತರ ರು. ಬೆಲೆ ಬಾಳುವ ಭೂಮಿಯನ್ನೂ ಸಹ ಹೊಂದಿದೆ. ಹಲವಾರು ದಾನಿಗಳು ವಿದ್ಯುತ್ ಕೇಂದ್ರಕ್ಕಾಗಿ ನಿಸ್ವಾರ್ಥದಿಂದ ಜಮೀನು ನೀಡಿದ್ದಾರೆ. ಈಗ ಅದೆಲ್ಲವೂ ಕಂಡವರ ಪಾಲಾಗುತ್ತದೆ ಎಂದು ಕಣಕೂರು ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗೀಕರಣ ಮಾಡಿದಲ್ಲಿ ರೈತರಿಗೆ ಸಿಗುತ್ತಿರುವ ರಿಯಾಯಿತಿಗಳಿಗೆ ಪೆಟ್ಟು ಬೀಳಲಿದೆ. ಸದ್ಯ ಬೆಸ್ಕಾಂಗಳು ಸೇವೆ ಎಂಬ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿವೆ. ಖಾಸಗೀಕರಣಗೊಳಿಸಿದ ನಂತರ ಕಂಪನಿಗೆ ಲಾಭ ಬರದಿದ್ದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ದೇಶದ ಆಹಾರ ಭದ್ರತೆಗೆ ನೆರವಾಗಿರುವ ರೈತರ ಬದುಕು ಖಾಸಗೀಕರಣದಿಂದ ಮೂರಾಬಟ್ಟೆಯಾಗಲಿದೆ. ಆದ್ದರಿಂದ ರೈತರು ಮತ್ತು ಜನರ ಬದುಕಿನೊಂದಿಗೆ ಚಲ್ಲಾಟವಾಡುವ ಇಂತಹ ನಿರ್ಣಯಗಳನ್ನು ಕೈಬಿಟ್ಟು ರೈತರ ಏಳಿಗೆಗೆ ಮತ್ತು ಜನರ ಏಳಿಗೆಗೆ ಬೇಕಾದ ಸೌಲಭ್ಯಗಳನ್ನು ಕೊಡುವತ್ತ ಗಮನಹರಿಸಲಿ ಎಂದು ಕಣಕೂರು ಚಂದ್ರಶೇಖರ್ ಹೇಳಿದರು.
ಪ್ರತಿಭಟನೆಯಲ್ಲಿ ಅನಿಲ್ ಕುಮಾರ್, ಆಟೋ ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಸುಧಾ, ಯುವ ಘಟಕದ ಅಧ್ಯಕ್ಷ ಹರ್ಷಿತ್, ವಿನೋದ್, ರಾಕೇಶ್, ಧನಂಜಯ್, ಶಿವಸ್ವಾಮಿ, ರಮೇಶ್, ರವಿಪ್ರಕಾಶ್, ಕೆ.ಬಿ.ರಾಮು, ಸತೀಶ್, ಸದಾನಂದ್, ಸುರೇಶ್, ಬಸವರಾಜು, ಶಿವಾನಂದಸ್ವಾಮಿ, ಆಟೋ ಜಗದೀಶ್, ದೇವರಾಜು ಸೇರಿದಂತೆ ಹಲವರು ಇದ್ದರು.
ಖಾಸಗೀಕರಣ ವಿರೋಧದ ಮನವಿ ಪತ್ರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಹಸೀಲ್ದಾರ್ ಎನ್. ಎ.ಕುಂಇ ಅಹಮದ್ ರವರ ಮೂಲಕ ಸಲ್ಲಿಸಲಾಯಿತು.