- ದಾವಣಗೆರೆಯಲ್ಲಿ ಹಂದಿಗಳನ್ನು ಬೀದಿಗೆ ಬಿಡದೇ, ಶೆಡ್‌ನಲ್ಲೇ ಸಾಕಬೇಕು: ಪಾಲಿಕೆ ಆಯುಕ್ತ ಸೂಚನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯ ಹಂದಿ ಸಾಕಾಣಿಕೆದಾರರಿಗೆ ಶಿವಮೊಗ್ಗ ಅಥವಾ ಬೆಂಗಳೂರಿನ ಹೆಸರಘಟ್ಟದ ತರಬೇತಿ ಕೇಂದ್ರಗಳಲ್ಲಿ ಹಂದಿ ಸಾಕಾಣಿಕೆ ಬಗ್ಗೆ ತರಬೇತಿ ನೀಡುವ ಬಗ್ಗೆ ಯೋಜನೆ ರೂಪಿಸಲಿದ್ದು, ತರಬೇತಿಯಲ್ಲಿ ಭಾಗಿಯಾದವರಿಗೆ ಹಂದಿ ಸಾಕಾಣಿಕೆಗೆ ಪ್ರೋತ್ಸಾಹಧನವನ್ನೂ ನೀಡುವುದಾಗಿ ಪಾಲಿಕೆ ಆಯುಕ್ತ ಡಾ. ಎನ್.ಮಹಾಂತೇಶ ತಿಳಿಸಿದರು.
ನಗರದ ಪಾಲಿಕೆಯಲ್ಲಿ ಶನಿವಾರ ಹಂದಿ ಸಾಕಾಣಿಕೆದಾರರ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವುದೇ ರೀತಿ ಸಮಸ್ಯೆ, ತೊಂದರೆ ಆಗದಂತೆ ಶೆಡ್‌ಗಳಲ್ಲಿ ವ್ಯವಸ್ಥಿತವಾಗಿ ಹಂದಿಗಳನ್ನು ಸಾಕುವ ಬಗ್ಗೆ, ಅವುಗಳ ಲಾಲನೆ, ಪಾಲನೆ ಬಗ್ಗೆ ಹಂದಿ ತರಬೇತಿ, ಮಾರ್ಗದರ್ಶನ ಕೊಡಿಸಲಾಗುವುದು ಎಂದರು.ಹಂದಿ ಸಾಕಾಣಿಕೆದಾರರು ವ್ಯವಸ್ಥಿತವಾಗಿ ಶೆಡ್‌ಗಳಲ್ಲೇ ಹಂದಿಗಳ ಸಾಕಾಣಿಕೆ ಮಾಡಬೇಕು. ಇಲ್ಲಿನ ಆಂಜನೇಯ ಬಡಾವಣೆ, ವಿದ್ಯಾನಗರ, ಜೆ.ಎಚ್.ಪಟೇಲ್ ಬಡಾವಣೆ, ಎಸ್.ಎಸ್. ಲೇಔಟ್, ಆಜಾದ್ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಹಂದಿಗಳ ಸಮಸ್ಯೆ ಬಗ್ಗೆ ದೂರು ಬಂದಿವೆ. ಹಂದಿ ಸಾಕಾಣಿಕೆದಾರರು ಎಲ್ಲೆಂದರಲ್ಲಿ ಹಂದಿಗಳನ್ನು ಬಿಡಬಾರದು. ಶೆಡ್‌ಗಳಲ್ಲೇ ಅವುಗಳನ್ನು ಸಾಕಬೇಕು ಎಂದು ಸೂಚಿಸಿದರು.
ಜನರು, ಮಕ್ಕಳ ಮೇಲೂ ಹಂದಿಗಳು ಹಾಳಿ ಮಾಡುತ್ತಿವೆ. ರಸ್ತೆಗಳಲ್ಲಿ ಇದ್ದಕ್ಕಿದ್ದಂತೆ ಹಂದಿಗಳು ಓಟಡಿ ಬಂದು ರಸ್ತೆ ಅಪಘಾತಗಳೂ ಸಂಭವಿಸುತ್ತಿವೆ. ಅನೇಕ ದ್ವಿಚಕ್ರ ವಾಹನ ಸವಾರರು, ಸೈಕಲ್ ಸವಾರರು ಬಿದ್ದು, ಕೈ-ಕಾಲು ಮುರಿದುಕೊಂಡ ನಿದರ್ಶನಗಳಿವೆ. ಇನ್ನು ಮುಂದೆ ಹಂದಿಗಳ ಹಾವಳಿಯಿಂದ ಜನರಿಗೆ ಯಾವುದೇ ಸಮಸ್ಯೆಯಾದರೆ ಮಹಾ ನಗರ ಪಾಲಿಕೆ ಸುಮ್ಮನೆ ಕೂಡುವುದಿಲ್ಲ ಎಂದು ಎಚ್ಚರಿಸಿದರು.
ಹಂದಿ ಸಾಕಾಣಿಕೆಗಾರಿಗೆ ದಾವಣಗೆರೆ ತಾ. ಹೆಬ್ಬಾಳ ಸಮೀಪ ಜಾಗ ಗುರುತಿಸಿದೆ. ಹಂದಿ ಸಾಕಾಣಿಕೆದಾರರು ಮುಂದೆ ಬಂದರೆ ಅಲ್ಲಿ ಶೆಡ್‌ಗಳನ್ನು ನಿರ್ಮಿಸಿಕೊಡಲಾಗುವುದು. ಆದರೆ, ಹಂದಿಗಳ ಮಾಲೀಕರು ಅದರ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಹಂದಿ ಸಾಕಾಣಿಕೆದಾರ ಜೀವನೋಪಾಯಕ್ಕೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಅರ್ಜಿ ಸಲ್ಲಿಸಿದರೆ ಹೆಬ್ಬಾಳ್ ಬಳಿ ಹಂದಿ ಸಾಕಾಣಿಕೆಗೆ ವ್ಯವಸ್ಥಿತ ಶೆಡ್ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸದ್ಯಕ್ಕೆ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಜನರು ಹಂದಿಗಳ ಸಾಕಾಣಿಕೆ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಆದರೆ, ಸಭೆಯಲ್ಲಿ ಪಾಲ್ಗೊಂಡಿರುವುದು ಕೇವಲ 3-4 ಜನ ಮಾತ್ರ. ಹೆಚ್ಚಿನ ಸಂಖ್ಯೆಯಲ್ಲಿ ಹಂದಿಗಳನ್ನು ಸಾಕಾಣಿಕೆ ಮಾಡುತ್ತಿರುವವರೆ ಸಭೆಗೆ ಗೈರಾಗಿದ್ದಾರೆಂಬ ಮಾತುಗಳು ಕೇಳಿಬಂದ ಹಿನ್ನೆಲೆ ಅಂತಹವರಿಗೆ ತಕ್ಷಣವೇ ನೋಟೀಸ್ ಜಾರಿಗೊಳಿಸುವಂತೆ ಪಾಲಿಕೆ ಆಯುಕ್ತ ಮಹಾಂತೇಶ ಅಧಿಕಾರಿಗಳಿಗೆ ಆದೇಶಿಸಿದರು.ಬೇತೂರು ರಸ್ತೆಯ ಹಂದಿ ಸಾಕಾಣಿಕೆದಾರ ಶಿವಣ್ಣ ಮಾತನಾಡಿ, ಹಳೆ ಭಾಗದಲ್ಲಿ 3 ವರ್ಷದ ಹಿಂದೆ 10 ಸಾವಿರಕ್ಕೂ ಅದಿಕ ಹಂದಿಗಳನ್ನು ಸಾಕಾಣಿಕೆ ಮಾಡಲಾಗುತ್ತಿತ್ತು. ಸಾಂಕ್ರಾಮಿಕ ರೋಗಗಳು, ಕಳ್ಳತನದ ಕಾರಣಕ್ಕೆ ಅವುಗಳ ಸಂಖ್ಯೆ ಈಗ ಗಣನೀಯವಾಗಿ ಇಳಿಕೆಯಾಗಿದೆ. ಹೆಚ್ಚೆಂದರೆ ಇನ್ನೊಂದು ಸಾವಿರ ಹಂದಿಗಳಷ್ಟೇ ಇರಬಹುದು. ಹಂದಿಗಳ ಕಳ್ಳರ ಕಾಟವೂ ವಿಪರೀತ ಹೆಚ್ಚಾಗಿದೆ. ನಮ್ಮ ಪೂರ್ವಿಕರ ಕಾಲದಿಂದಲೂ ಹಂದಿ ಸಾಕಾಣಿಕೆ ಮಾಡುತ್ತಿದ್ದೇವೆ. ನಮ್ಮ ಶೆಡ್‌ನಲ್ಲಿ ನಾಲ್ಕೈದು ಹಂದಿ ಮಾತ್ರ ಸಾಕುತ್ತಿದ್ದು, ಅವುಗಳನ್ನು ಹೊರಗೆ ಬಿಟ್ಟಿಲ್ಲ ಎಂದರು.
ಸಭೆಯಲ್ಲಿ ಪಾಲಿಕೆ ಅಧಿಕಾರಿ, ಸಿಬ್ಬಂದಿ ಇದ್ದರು.- - -
(ಕೋಟ್ಸ್) ಹೆಬ್ಬಾಳ್ ಬಳಿ ಹಂದಿಗಳನ್ನು ಶೆಡ್ ನಿರ್ಮಿಸಿ ಕೊಟ್ಟರೆ, ನಮಗೆ ದಾವಣಗೆರೆಯಿಂದ ಅಲ್ಲಿಗೆ ಹೋಗಿ ಬರುವುದಕ್ಕೆ ದೂರವಾಗುತ್ತದೆ. ನಾಲ್ಕೈದು ಹಂದಿಗಳನ್ನು ಸಾಕಲು ನಿತ್ಯವೂ ಹೆಬ್ಬಾಳದವರೆಗೆ ಸಂಚರಿಸುವುದು ತ್ರಾಸದ ಕೆಲಸವಾಗುತ್ತದೆ.- ಪಕ್ಕೀರಪ್ಪ, ಕೊಟ್ರೇಶ, ಹಂದಿ ಸಾಕಾಣಿಕೆದಾರರು.
* (ಟಾಪ್ ಕೊಟ್) ದಾವಣಗೆರೆಯಲ್ಲಿ ಹಂದಿ ಸಾಕಾಣಿಕೆದಾರರ ಮೇಲೆ ಏಕಾಏಕಿ ಕ್ರಮ ಕೈಗೊಳ್ಳುವುದಿಲ್ಲ. ಸಾಕಾಣಿಕೆದಾರರಿಗೆ ಮತ್ತೊಮ್ಮೆ ಮಹಾ ನಗರ ಪಾಲಿಕೆಯಿಂದ ನೋಟೀಸ್ ಜಾರಿಗೊಳಿಸಿ, ಶೆಡ್‌ಗಳಲ್ಲಿ ಹಂದಿಗಳನ್ನು ಸಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಅಷ್ಟಕ್ಕೆ ಸಮಸ್ಯೆ ಬಗೆಹರಿಯದಿದ್ದರೆ ನಿಯಮಾನುಸಾರ ಪಾಲಿಕೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು.- ಡಾ.ಎನ್.ಮಹಾಂತೇಶ, ಆಯುಕ್ತ, ದಾವಣಗೆರೆ ಪಾಲಿಕೆ.
- - --20ಕೆಡಿವಿಜಿ7, 8:
ದಾವಣಗೆರೆ ಪಾಲಿಕೆಯಲ್ಲಿ ಹಂದಿ ಮಾಲೀಕರ ಸಭೆಯಲ್ಲಿ ಪಾಲಿಕೆ ಆಯುಕ್ತ ಡಾ.ಎನ್.ಮಹಾಂತೇಶ ಮಾತನಾಡಿದರು.